ಸಮಗ್ರ ನ್ಯೂಸ್: ಅಪರಿಚಿತ (unknown) ನಂಬರ್, ಸ್ಪ್ಯಾಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ.
ಟೆಲಿಕಾಂ ಆಪರೇಟರ್‌ಗಳ ಬಳಿ ಲಭ್ಯವಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.
ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್’ನಂತಹ ಆ್ಯಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆ್ಯಪ್‌ಗಳು ಮಾಹಿತಿಯನ್ನು ಕ್ರೌಡ್ ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಪರಿಪೂರ್ಣ ಎನ್ನಲು ಸಾಧ್ಯವಿಲ್ಲ. ಆದರೆ ಕೆವೈಸಿ ಮೂಲಕ ಸಂಗ್ರಹಿತ ಮಾಹಿತಿಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ.