ಕೈ ಪಾಳಯದಲ್ಲಿ ಬಿರುಸಿನ ಕಸರತ್ತು, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಇನಾಯತ್ ಅಲಿ ಅರ್ಜಿ ಸಲ್ಲಿಕೆ
ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡೋದಾಗಿ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಧ್ಯೆ ಟಿಕೆಟ್ ಗಾಗಿ ಆಕಾಂಕ್ಷಿಗಳ ಮಧ್ಯೆ ಜಂಗೀಕುಸ್ತಿ ಆರಂಭವಾಗಿದ್ದು ಮಾಜಿಗಳ ಜೊತೆಗೆ ಹೊಸ ಮುಖಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಬಲ ಪೈಪೋಟಿಯಲ್ಲಿ ನಿರತರಾಗಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಬಿಜೆಪಿಯ ಶಾಸಕ ಭರತ್ ಶೆಟ್ಟಿ ಎದುರು ಹೀನಾಯವಾಗಿ ಸೋಲು ಕಂಡಿದ್ದರು. ಬಾವಾ ಸೋಲು ಕ್ಷೇತ್ರದ ಮತದಾರ ಮಾತ್ರವಲ್ಲ ಖುದ್ದು ಬಾವಾ ಅವರೇ ಊಹಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಚುನಾವಣಾ ಪೂರ್ವದಲ್ಲಿ ನಡೆದಿದ್ದ ದೀಪಕ್ ರಾವ್ ಅನ್ನೋ ಬಿಜೆಪಿ ಕಾರ್ಯಕರ್ತನ ಹತ್ಯೆಯಿಂದ ಬಾವಾ ಮತಗಳು ಒಡೆದು ಯುವ ಅಭ್ಯರ್ಥಿ ಭರತ್ ಶೆಟ್ಟಿ ನಿರಾಯಾಸವಾಗಿ ಗೆಲುವು ದಾಖಲಿಸಿದ್ದರು.
ಈ ಬಾರಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ನಾಮುಂದು ತಾಮುಂದು ಅಂತ ಆಕಾಂಕ್ಷಿಗಳು ಕ್ಯೂ ನಿಂತಿದ್ದಾರೆ. ಮೊಯಿದೀನ್ ಬಾವಾ ಟಿಕೆಟ್ ಪಡೆಯಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರೂ ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇನಾಯತ್ ಕಳೆದ ಕೆಲವು ತಿಂಗಳುಗಳಿಂದ ಉತ್ತರ ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ.
ಎನ್‌ಎಸ್‌ಯುಐ ಮುಲ್ಕಿ ಬ್ಲಾಕ್ ಅಧ್ಯಕ್ಷರಾಗಿ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾಗಿ, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಎನ್‌ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಾರಿ ಟಿಕೆಟ್ ಕೊಟ್ಟರೆ ಜನಸೇವೆ ಮಾಡುವುದಾಗಿ ಇನಾಯತ್ ಅಲಿ ಹೇಳುತ್ತಾರೆ.
ಇವರ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಹೋರಾಟಗಳಿಂದಲೇ ಹೆಸರು ಪಡೆದಿರುವ ಪ್ರತಿಭಾ ಕುಳಾಯಿ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದು ಈ ಬಾರಿ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಇನಾಯತ್ ಅಲಿ ಕ್ಷೇತ್ರಕ್ಕೆ ಹೊಸಮುಖವಾದರೂ ಜನರಿಗೆ ಪರಿಚಿತರು. ಈಗಾಗಲೇ ಕ್ಷೇತ್ರದಲ್ಲಿ ಬೃಹತ್ ಕಟೌಟ್, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇನಾಯತ್ ಯುವಕರನ್ನು ಜಾತಿ ಮತ ನೋಡದೆ ಬೆಂಬಲಿಸುವ ಮೂಲಕ ಪ್ರಚಾರದಲ್ಲಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರಕ್ಕೆ ಇವರ ಹೊರತಾಗಿ ಇನ್ನೂ ಕೆಲವು ಮಂದಿ ಹೊರಗಿನವರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಈ ಬಾರಿ ರಾಜ್ಯದಲ್ಲಿ ಹೊಸಮುಖಗಳಿಗೆ ಮಣೆ ಹಾಕುವ ಸೂಚನೆ ನೀಡಿದ್ದು ಹಾಗೊಂದು ವೇಳೆ ಆದಲ್ಲಿ ಮಾಜಿಗಳು ಟಿಕೆಟ್ ವಂಚಿತರಾಗಲಿದ್ದಾರೆ.