ಸಮಗ್ರ ನ್ಯೂಸ್: ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶದಲ್ಲಿ ಒಕ್ಕಲಿಗ ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರು ಸುಸ್ತಾದ ಘಟನೆ ನಡೆದಿದೆ. ಒಕ್ಕಲಿಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲವೆಂದು ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಒಕ್ಕಲಿಗ ಹುಡುಗರು ಮುಗಿಬಿದ್ದಿದ್ದರು. ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚಿನ ಹುಡುಗರ ಅರ್ಜಿ ಬಂದಿದ್ದವು.
ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತ ಅವರ ಪೋಷಕರು ಕ್ಯೂ ನಿಂತಿದ್ದರು. ವಧು ವರರ ಸಮಾವೇಶಕ್ಕೆಂದು ಭಾರೀ ಸಂಖ್ಯೆಯ ಜನಸ್ತೋಮ ಹರಿದುಬಂದಿತ್ತು.
ಜನಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಡುವಂತಾಯಿತು. ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ(ರಿ) ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಸಮಾವೇಶ ನಡೆಸಲಾಗಿತ್ತು.
ಸಮಾವೇಶಕ್ಕೆ ಆಗಮಿಸಿದ್ದ ಬಹುತೇಕ ಒಕ್ಕಲಿಗ ಗಂಡು ಮಕ್ಕಳು ರೈತರು ಅಥವಾ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡವರು. ರೈತರೇ ನಾಡಿನ ಜೀವನಾಡಿ ಎನ್ನುವ ಈ ದಿನಗಳಲ್ಲಿ ರೈತರೊಂದಿಗೆ ಮದುವೆಯಾಗಲು ಹೆಣ್ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಏನೇ ಆದರೂ ಇಂಜಿನಿಯರ್, ಡಾಕ್ಟರ್ ವೃತ್ತಿ ಆರಿಸಿಕೊಂಡಿರುವ ಹುಡುಗರೇ ಇಂದು ಬಹುತೇಕ ಹೆಣ್ಮಕ್ಕಳ ಪ್ರಥಮ ಆದ್ಯತೆಯಾಗಿದೆ ಎಂಬುವುದು ಕಹಿ ಸತ್ಯ.
ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಎಂಬುದು ಚುಂಚನಗಿರಿಯ ವಧು-ವರ ಸಮಾವೇಶದಲ್ಲಿ ಸತ್ಯ ಬಯಲಾಗಿದೆ. ಸಾವಿರಾರು ಒಕ್ಕಲಿಗ ಹುಡುಗರು ವಧುವಿಗಾಗಿ ಮುಗಿಬಿದಿದ್ದಾರೆ. ರಾಜ್ಯ ಮಟ್ಟದ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದು,10 ಸಾವಿರಕ್ಕೂ ಹೆಚ್ಚು ಹುಡುಗರು ಸಂಗಾತಿ ಅರಸಿ ಬಂದಿದ್ಧಾರೆ.