ಸಮಗ್ರ ನ್ಯೂಸ್: ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗ ನಂತರ ಈಗ ಅದಾನಿ ಗ್ರೂಪ್ ಕಣ್ಣು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಸ್ತುವಾರಿ, ಕಾರ್ಯ ನಿರ್ವಹಣೆ ಮಾಡುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಬಿಐಎಎಲ್) ಪಾಲನ್ನು ತೆಗೆದುಕೊಳ್ಳುವ ಬಗ್ಗೆ ಅದಾನಿ ಗ್ರೂಪ್ ಚಿಂತಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಉನ್ನತ ಮೂಲಗಳು ಮಾಹಿತಿ ನೀಡಿವೆ.
“ಅದಾನಿ ಗ್ರೂಪ್ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಪಾಲನ್ನು ಖರೀದಿಸಲು ಹಲವು ವಿಧಾನಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಫೇರ್‌ಫ್ಯಾಕ್ಸ್‌ನೊಂದಿಗೆ ಚರ್ಚೆಗಳು ನಡೆದಿವೆ. ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಎಎಐ) ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಸಂಸ್ಥೆ ಉತ್ಸಾಹ ಹೊಂದಿದೆ” ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಐಎಎಲ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದದ ಅಡಿಯಲ್ಲಿ ಹೊಂದಿದ್ದು, ನಿಲ್ದಾಣವನ್ನು ನಿರ್ವಹಿಸುತ್ತಿದೆ. ಈ ಒಪ್ಪಂದವನ್ನು ಇನ್ನೂ 30 ವರ್ಷಗಳವರೆಗೆ ನವೀಕರಿಸುವ ಆಯ್ಕೆಯನ್ನು ಹೊಂದಿದೆ.