ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸ ಪಡಬೇಕೇ? ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಸಿಎಂ ಅವರ ಸ್ಥಿತಿ ಶೋಚನೀಯವಾಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಸಿಎಂ ಬಗ್ಗೆ ವ್ಯಂಗ್ಯವಾಡಿದೆ.
ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್ ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂಬುದಾಗಿ ಕಿಡಿಕಾರಿದೆ.
ತನ್ನ ಕ್ಷೇತ್ರ ಮುಳುಗಿದ್ದಾಗ ದೋಸೆ ಸವಿಯುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಬದಲು ಗುಜರಾತಿನ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತಾಡುತ್ತಿದ್ದಾರೆ! ನರೇಂದ್ರ ಮೋದಿ ಅವರೇ, ನಿಮ್ಮ ಬೆಂಬಲಿಗ ಉದ್ಯಮಿಯೊಬ್ಬರು ನಿಮ್ಮ ಸಂಸದರ ಮತ್ತು ಸರ್ಕಾರದ ಯೋಗ್ಯತೆ ತಿಳಿಸಿದ್ದಾರೆ. ನಿಮ್ಮವರ ಮಾತನ್ನೂ ನೀವು ಗಮನಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.