ಸಮಗ್ರ ನ್ಯೂಸ್: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಅಪಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ತೀರ್ಪಿನಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ.
ಸುಧೀರ್ಘ ಕಾನೂನು ಹೋರಾಟದ ಬಳಿಕ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ಖಾಯಂ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ ಆರೋಪ ಮಾಡಿದ್ದರು. ಅಲ್ಲದೇ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಬಗ್ಗೆ ನಿರಂತರವಾಗಿ ಸಾಮಾಜಿಕ ತಾಣಗಳ ಮೂಲಕ ಬರಹಗಳನ್ನ ಬರೆದಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ಹೆಗ್ಗಡೆಯವರ ವಿರುದ್ದ ಅಪಪ್ರಚಾರ ಮಾಡದಂತೆ ಬೆಳ್ತಂಗಡಿ ಕೋರ್ಟ್ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ ಅದನ್ನ ಉಲ್ಲಂಘಿಸಿ ಮತ್ತೆ ಆರೋಪ ಮುಂದುವರೆಸಿದ್ದ ಸೋಮನಾಥ ನಾಯಕ್ ಸಾಮಾಜಿಕ ತಾಣಗಳಲ್ಲೂ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ದೂರಲಾಗಿದೆ.
ಸುಧೀರ್ಘ ವಿಚಾರಣೆ ಬಳಿಕ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ಕೋರ್ಟ್ ಆದೇಶ ಮಾಡಿತ್ತು. ಆದರೆ ಬೆಳ್ತಂಗಡಿ ಕೋರ್ಟ್ ತೀರ್ಪು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ನಾಯಕ್ ಕಾನೂನು ಹೋರಾಟ ನಡೆಸಿದ್ದರು.
ಆದರೆ ಸುಧೀರ್ಘ ವಿಚಾರಣೆ ಬಳಿಕ ಬೆಳ್ತಂಗಡಿ ಕೋಟರಿನ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದಕ್ಕೂ ಸುಮ್ಮನಾಗದ ಸೋಮನಾಥ ನಾಯಕ್, ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ ನಿಂದಲೂ ಬೆಳ್ತಂಗಡಿ ಕೋರ್ಟ್ ನ ಜೈಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟವಾಗಿದೆ. ಹೀಗಾಗಿ ಇಂದು ಅಪಾರ ಬೆಂಬಲಿಗರ ಜೊತೆ ಸೋಮನಾಥ ನಾಯಕ್ ಬೆಳ್ತಂಗಡಿ ಕೋರ್ಟ್‌ಗೆ ಶರಣಾಗಿದ್ದಾರೆ. ಮೂರು ತಿಂಗಳ ಸೆರೆ ವಾಸಕ್ಕೆ ಮಂಗಳೂರು ಜೈಲಿಗೆ ಕಳುಹಿಸಿದ ಬೆಳ್ತಂಗಡಿ ನ್ಯಾಯಾಲಯ, ಜೈಲು ಶಿಕ್ಷೆ ಜೊತೆಗೆ 4.5ಲಕ್ಷ ಪರಿಹಾರ ನೀಡಲು ಆದೇಶ ನೀಡಿದೆ.