ಸಮಗ್ರ ನ್ಯೂಸ್: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ರಾಜ್ಯಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಪ್ಪು ಸಮಾಧಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುತ್ತಿದ್ದಾರೆ.
ಅಕ್ಟೋಬರ್ 28ರ ರಾತ್ರಿ ಪೂರ್ತಿ ಪುನೀತ್ ರಾಜ್ಕುಮಾರ್ ಅವರ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ದೂರದ ಊರುಗಳಿಂದ ಬಂದ ಅನೇಕ ಅಭಿಮಾನಿಗಳಿಗೆ ಇದರಿಂದ ಅನುಕೂಲ ಆಗಲಿದೆ.
ಎಲ್ಲರಿಗೂ ಅಪ್ಪು ಸಮಾಧಿಯ ದರ್ಶನ ಸಿಗಲಿದೆ. ಇದರ ಜೊತೆಗೆ ಸಾಧು ಕೋಕಿಲ ಅವರು ಪುನೀತ್ಗೆ ಸಂಗೀತ ನಮನ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರ ತಂಡದವರು ಅಪ್ಪು ಸಮಾಧಿ ಬಳಿ ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ.
ಪುನೀತ್ ರಾಜ್ಕುಮಾರ್ ಅವರನ್ನು ಕಂಡರೆ ಜನಸಾಮಾನ್ಯರ ರೀತಿ ಚಿತ್ರರಂಗದವರಿಗೂ ಅಚ್ಚುಮೆಚ್ಚು. ಇಂದು ಅವರು ಇಲ್ಲ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಬಗೆಯಲ್ಲಿ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ಸಾಧು ಕೋಕಿಲ ಅವರು ನಟನೆ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ತಮ್ಮ ತಂಡದ ಜೊತೆ ಸೇರಿ ಅವರು ಅಪ್ಪುಗಾಗಿ ಸಂಗೀತ ನಮನ ಸಲ್ಲಿಸಲು ಸಜ್ಜಾಗಿದ್ದಾರೆ.
ಇನ್ನು ನಾಡಿನ ಹಲವೆಡೆ ಪುನಿತ್ ಪುಣ್ಯಸ್ಮರಣೆ ಪ್ರಯುಕ್ತ ಅಭಿಮಾನಿಗಳು ನೇತ್ರದಾನ, ರಕ್ತದಾನದಂತಹ ಮಹಾನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅನೇಕ ರಸ್ತೆಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇರುವ ಕನ್ನಡದ ಬಾವುಟ ಹಾರಾಡುತ್ತಿದೆ. ಹಲವು ಬಗೆಯಲ್ಲಿ ಅಭಿಮಾನಿಗಳು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
ಒಟ್ಟಾರೆ ನೆಚ್ಚಿನ ನಟ ಅಗಲಿ ಒಂದು ವರ್ಷವಾದರೂ ಯಾರೊಬ್ಬರೂ ಆತ ಇಲ್ಲ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಜೊತೆಗಿರದ ಜೀವ ಎಂದಿಗೂ ಜೀವಂತವಾಗಿರುವುದಂತೂ ಸತ್ಯ.