ಸಮಗ್ರ ನ್ಯೂಸ್: ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಗೇಟ್ ಸಮೀಪದ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ವಿಧಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಎನ್‌ಐಟಿಕೆ ಬಳಿಯ ಟೋಲ್ ಗೇಟ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟಣೆ ವತಿಯಿಂದ ಇಂದಿನಿಂದ ಟೋಲ್ ಗೇಟ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಇದ್ದು, ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ, ಸಾರ್ವಜನಿಕರ ಸುರಕ್ಷತೆ ಕಾಪಾಡುವ ಮತ್ತು ಟೋಲ್ ಗೇಟ್‌ನ ಭದ್ರತೆಯ ಹಿತದೃಷ್ಠಿಯಿಂದ ಸೆಕ್ಷನ್ ಜಾರಿ ಮಾಡಲಾಗಿದೆ.
ವಾಸ್ತವವಾಗಿ, ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ 18ರಂದು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದರು. ಆ ನಂತರದಲ್ಲಿ ಸುರತ್ಕಲ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿಯು ಟೋಲ್ ಗೇಟ್ ಅನ್ನು ತೆರವುಗೊಳಿಸುವವರೆಗೂ ಹೋರಾಟ ಮುಂದುವರೆಯಲಿದ್ದು ಅಲ್ಲಿಯವರೆಗೂ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿತ್ತು.