ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಹಾಗೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕೆಂಬ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ಚರ್ಚೆಗಳು ಕೇಳಿ ಬಂತು. ಆದರೆ ಕೆಂಪೇಗೌಡರ ಎದುರು ಯಾವ ಟಿಪ್ಪು ಏನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರು ನಗರದ ಲೇಡಿಹಿಲ್ ಬಳಿ ಮನಪಾ ಈಜುಕೊಳದ ಆವರಣದಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟಿಪ್ಪುವಿನ ನಿರಂತರ ದಾಳಿಗಳ ಬಗ್ಗೆ ಮಂಗಳೂರು ಹಾಗೂ ಕೊಡಗುಗಳಲ್ಲಿ ಸ್ಪಷ್ಟ ಉಲ್ಲೇಖಗಳಿವೆ. ಆತನ ನೆತ್ತರಕೆರೆ ವಿಚಾರ, ಚರ್ಚ್‌ಗಳ ಮೇಲಿನ ದಾಳಿ, ಮತಾಂತರ ಪ್ರಕ್ರಿಯೆಗಳು ಚರ್ಚೆಯಲ್ಲಿದೆ. ಆದರೆ ಕೆಂಪೇಗೌಡರು, ಒಡೆಯರ್‌ಗಳ ವಿಚಾರದಲ್ಲಿ ಎಲ್ಲೂ ಚರ್ಚೆಗಳಿಲ್ಲ, ಸಂದೇಹಗಳಿಲ್ಲ. ಕೆಂಪೇಗೌಡರು ಸರ್ವ ಸಮಾಜ, ಸಮುದಾಯಗಳನ್ನು ಒಂದಾಗಿ ಬೆಂಗಳೂರನ್ನು ಕಟ್ಟಿದವರು. ಅಂತಹ ಶ್ರೇಷ್ಠ ಸಾಧಕರ ಸಾಧನೆಯ ಬಗ್ಗೆ ಶಾಶ್ವತವಾಗಿ ನೆನಪು ಮಾಡುವಂತಹ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದರು.
ಕೆಂಪೇಗೌಡರು ಓರ್ವ ಸಾಧಕನಾಗಿ ಬೆಂಗಳೂರನ್ನು ಕಟ್ಟಿ ಬೆಳೆಸಿ ನಮ್ಮ ರಾಜ್ಯದ ಅಭಿವೃದ್ಧಿ ಪಥಕ್ಕೆ ಮುನ್ನುಡಿಯನ್ನು ಬರೆದದವರು. ಅವರ ಪರಿಚಯ ಮುಂದಿನ ಪೀಳಿಗೆಗೆ ಆಗಬೇಕು, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸರಕಾರ ಕೆಂಪೇಗೌಡ ಥೀಮ್ ಪಾರ್ಕ್ ಹಾಗೂ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.