Ad Widget .

ದೀಪಾವಳಿಯ ಆಚರಣೆ ಮತ್ತು ಮಹತ್ವ

ದೀಪಾವಳಿ ದೀಪಗಳ ಹಬ್ಬ ಬೆಳಕಿನ ಹಬ್ಬ. ಮನೆ ಮನಸ್ಸಿನ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೆಂದೇ ಹೇಳಬಹುದು. ದೀಪಾವಳಿ ಹಬ್ಬವನ್ನು ನರಕಚತುರ್ದಶಿಯಿಂದ ಪ್ರಾರಂಭಿಸಿ, ಸಾಮಾನ್ಯವಾಗಿ ಮೂರು ದಿನಗಳವರೆಗೆ ಆಚರಿಸುವುದು ವಾಡಿಕೆ. ಜಾತಿ ಬೇಧವಿಲ್ಲದೇ ಬಂಧು-ಬಾಂಧವರು ಸ್ನೇಹಿತರೊಂದಿಗೆ ಉತ್ಸಾಹ ದಿಂದ ಆಚರಿಸುವ ದೊಡ್ಡ ಹಬ್ಬವೇ ’ದೀಪಾವಳಿ’. ನಗರ -ಪಟ್ಟಣಗಳಲ್ಲಿ ದೀಪಾವಳಿ ಎಂದೊಡನೆ ದೀಪಗಳನ್ನು ಹಚ್ಚಿ ಮನೆಯ ಮುಂದಿನ ಅಂಗಳವನ್ನು ಸಿಂಗರಿಸುವುದರ ಜೊತೆಗೆ ಪಟಾಕಿ ಸಿಡಿಸಿ ಸಿಡಿಮದ್ದು ಸಿಡಿಸುವುದು ಹಬ್ಬದ ಪ್ರಮುಖ ಆಚರಣೆಯಾಗಿ ಕಂಡು ಬರುತ್ತದೆ. 

Ad Widget . Ad Widget .

ದೀಪಗಳ ಹಬ್ಬ ದೀಪಾವಳಿಯನ್ನು ನಮ್ಮ ದೇಶದ ಮೂಲೆ ಮೂಲೆಗಳಲ್ಲೂ ಸಡಗರದಿಂದ ಸಂಭ್ರಮದಿಂದ ಆಚರಿಸುತ್ತಾರೆ. ವೈವಿಧ್ಯತೆಗೆ ಹೆಸರಾಗಿರುವ ನಮ್ಮ ದೇಶದಲ್ಲಿ ಜನ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಹಲವು ಆಯಾಮಗಳಲ್ಲಿ ಆಚರಿಸುವ ಹಬ್ಬ ದೀಪಾವಳಿ ಒಂದಡೆಯಾದರೆ, ನಮ್ಮ ಊರಿನಲ್ಲಿ ಅಂದರೆ ಗ್ರಾಮೀಣ ಪ್ರದೇಶದಲ್ಲಿ ಆಚರಿಸುವ ದೀಪಾವಳಿ ತನ್ನದೇ ಆದ ವೈಶಿಷ್ಠತೆಯನ್ನು ಹೊಂದಿದೆ. ಅದರಲ್ಲಂತೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೀಪಗಳ ಹಬ್ಬ ದೀಪಾವಳಿಯನ್ನು ಅರ್ಥಪೂರ್ಣವಾಗಿ ಅಚರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯ ದೀಪಾವಳಿ ಆಚರಣೆ ಮಾತ್ರ ಸಾಂಪ್ರದಾಯಿಕವಾಗಿಯೇ ಇರುತ್ತದೆ.

Ad Widget . Ad Widget .

 ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳನ್ನು ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. 

ಇನ್ನು ಭಾರತೀಯ ಹಬ್ಬವಾಗಿ ಸಂತೋಷದಿಂದ ಕುಣಿಯುವ ಅಂದಿನ ದೀಪಾವಳಿ ನೆನೆಯುವುದೇ ಸುಂದರ ಅನುಭವ. ಆದರೆ ಆಧುನಿಕತೆಯ ಗಾಳಿಗೆ ಮೈಯೊಡ್ಡಿರುವ ನಾವು, ನೀವು ಹಿಂದಿನಂತೆ ದೀಪಾವಳಿ ಆಚರಿಸುತ್ತಿದ್ದೇವೆಯೇ? …ಬದಲಾವಣೆಯ ಸುಳಿಯಲ್ಲಿ ಸಿಕ್ಕಿ ದೀಪಾವಳಿ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಶಿಸ್ತು ಬದ್ಧ ದೀಪಾವಳಿ ಆಚರಣೆಯನ್ನು ಕೆಲವೇ ಕೆಲವು ಕುಟುಂಬಗಳು ಆಚರಿಸುತ್ತಿವೆ. ಬಹುಪಾಲು ಜನರಿಗೆ ಹಬ್ಬಗಳೆಂದರೆ ಭರ್ಜರಿ ಭೋಜನ ಮತ್ತು ಪಟಾಕಿಯ ಗತ್ತು ಮಾತ್ರ ಈಗಿನ ಕಾಲಗಟ್ಟದಲ್ಲಿ ಆಗಿದೆ.

ನನ್ನ ಅರ್ಥದಲ್ಲಿ ದೀಪಾವಳಿಯೆಂದರೆ ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ. ವಿದ್ಯುತ್‌ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ತರುವಂತಹುದು. ’ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ|’ ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ, ಅವರ ಮನೆಯಲ್ಲಿ ಯಾವಾಗಲೂ ಅಂಧಕಾರವೇ ಇರುತ್ತದೆ. ಅವರು ಪ್ರಕಾಶದೆಡೆಗೆ ಅಂದರೆ ಜ್ಞಾನದೆಡೆಗೆ ಹೋಗಲಾರರು. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ. ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ. ಹಾಗಾದರೆ ಬನ್ನಿ ನಾವು ಈ ವರ್ಷದ ದೀಪಾವಳಿಯನ್ನು ಆತ್ಮದೀಪವನ್ನು ಬೆಳಗಿಸಿ, ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೊಣ ಎಂದು ಹೇಳುತ್ತಾ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಕಾವ್ಯ ರಾಧಾಕೃಷ್ಣ ಕೆದ್ಕಾರ್.

Leave a Comment

Your email address will not be published. Required fields are marked *