ಸಮಗ್ರ ನ್ಯೂಸ್: ದೈವಾರಾಧನೆ ಕುರಿತಂತೆ ನಟ ಚೇತನ್ ಕುಮಾರ್ ಆಡಿರುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿ ಎನ್ನುವುದು ನಿಜವಲ್ಲ ಎಂದಿರುವ ಚೇತನ್, ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇದೆ ಎಂದು ಹೇಳಿದ್ದರು. ಚೇತನ್ ಮಾತಿಗೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಹಿಂದೂ ಪರ ಸಂಘಟನೆಗಳಿಂದ ಚೇತನ್ ವಿರುದ್ಧ ದೂರು ದಾಖಲಾಗಿದೆ. ಇದೀಗ ಚೇತನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ದೈವ ನರ್ತಕರು ಚೇತನ್ ವಿರುದ್ಧ ಪಂಜುರ್ಲಿ (Panjurli) ದೈವಕ್ಕೇ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಚೇತನ್ ಹೇಳಿದ್ದಿಷ್ಟು: ಕಾಂತಾರ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ್, ನಮ್ಮ ಕನ್ನಡದ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.
ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.