ಸಮಗ್ರ ನ್ಯೂಸ್: ಇದೇ ಮೊದಲ ಬಾರಿಗೆ ಕೆಎಸ್ ಆರ್ ಟಿಸಿ ಸಿಬಂದಿಗಳು ಹಾಗೂ ಅವರ ಅವಲಂಬಿತರಿಗಾಗಿ 50 ಲಕ್ಷ ರೂ. ಅಪಘಾತ ವಿಮೆ ಪ್ಯಾಕೇಜ್ ಯೋಜನೆಯ ಒಡಂಬಡಿಕೆಗೆ ಬುಧವಾರ ಸಹಿ ಹಾಕಲಾಗಿದೆ.
ಸಂಸ್ಥೆಗಾಗಿ ಹಗಲಿರುಳು ದುಡಿಯುವ ಸಿಬಂದಿಗಳ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷರಾದ ಎಂ. ಚಂದ್ರಪ್ಪರವರ ಸಮ್ಮುಖದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ಪಂಕಜ್ ತಪ್ಲಿಯಾರ್ ಅವರು ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಎಂ. ಚಂದ್ರಪ್ಪ, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿದ್ದು, ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತ್ಯಧಿಕ ಮೊತ್ತದ ಅಪಘಾತ ಒಳಗೊಂಡಂತೆ ನೀಡಲಾಗುವ ವಿಮಾ ಯೋಜನೆಯಾಗಿದೆ ಎಂದು ಸಂತಸ ವ್ಯಕ್ರಪಡಿಸಿದರು.