ಸಮಗ್ರ ನ್ಯೂಸ್: ಬೆಂಗಳೂರಿನ ಆರ್. ಟಿ. ನಗರ ಸಂಚಾರಿ ಠಾಣೆ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿದ್ದ ಸಂಚಾರಿ ಪೊಲೀಸರಿಗೆ ದಂಡ ಹಾಕಿದ್ದಾರೆ. ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ. ಹಾಫ್ ಹೆಲ್ಮೆಟ್ ಪ್ರಕರಣವನ್ನು ಪೊಲೀಸರ ವಿರುದ್ಧ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಹಾಫ್ ಹೆಲ್ಮೆಟ್ ಧರಿಸದಂತೆ ಪೊಲೀಸರಿಗೆ ಸೂಚನೆ ನೀಡಿದ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ವಾರಗಳ ಕಾಲ ಪೊಲೀಸರು ವಿಶೇಷ ಅಭಿಯಾನ ನಡೆಸಿದ್ದರು. ಹಾಫ್ ಹೆಲ್ಮೆಟ್ ಧರಿಸಿ ಬರುವ ಸಂಚಾರಿ ಮತ್ತು ಇತರ ಪೊಲೀಸರನ್ನು ಹಿಡಿದು ದಂಡ ಪ್ರಯೋಗ ಮಾಡಿದ್ದರು.
ಅಕ್ಟೋಬರ್ ತಿಂಗಳಿನಲ್ಲಿಯೂ ಈ ದಂಡ ಪ್ರಯೋಗ ಮುಂದುವರೆದಿದೆ. ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಿ ಬರುವ ಪೊಲೀಸರಿಗೆ ದಂಡ ವಿಧಿಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಟೀಕೆಗಳಿಂದ ಮುಕ್ತವಾಗಲು ಇಲಾಖೆ ಬಯಸಿದೆ.
ಹಾಫ್ ಹೆಲ್ಮೆಟ್ ನಿಷೇಧ: ಪೂರ್ತಿ ಮುಖ ಮುಚ್ಚದ, ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಹಾಫ್ ಹೆಲ್ಮೆಟ್ ನಿಷೇಧಿಸಿದ್ದಾರೆ.
ರಸ್ತೆ ಅಪಘಾತಗಳು ಸಂಭವಿಸಿದಾಗ ಅರ್ಧ ಹೆಲ್ಮೆಟ್ ಧರಿಸಿದವರಿಗೆ ಹೆಚ್ಚಿನ ಗಾಯಗಳು ಉಂಟಾಗುತ್ತಿವೆ. ತಲೆಗೆ ಪೆಟ್ಟುಬಿದ್ದು ಮೃತಪಟ್ಟಿರುವ ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ವಾಹನ ಸವಾರರ ಸುರಕ್ಷತೆ ದೃಷ್ಠಿಯಿಂದ ಪೊಲೀಸರು ಹಾಫ್ ಹೆಲ್ಮೆಟ್ ನಿಷೇಧ ಮಾಡಿದ್ದಾರೆ.