ಸಮಗ್ರ ನ್ಯೂಸ್: ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಾಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಾಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗಿದೆ.
ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಾಗ್ರಿ ಇದ್ದ ಜಾಗದ ಸನಿಹದಲ್ಲೇ ನದಿ ದಡದಲ್ಲಿ ಬೃಹತ್ ಗಾತ್ರದ ಕಾಳಿಂಗಸರ್ಪವೊಂದನ್ನೂ ಅವರು ಗಮನಿಸಿದ್ದಾರೆ. ಕೂಡಲೇ ಅವರು ಇತರರಿಗೆ ಮಾಹಿತಿ ನೀಡಿದ್ದು, ಇದನ್ನು ವೀಕ್ಷಿಸಲು ಹಲವಾರು ಜನರು ಸ್ಥಳಕ್ಕಾಗಮಿಸಿದ್ದರು. ಆದರೆ ಈ ಪೂಜಾ ಸಾಮಾಗ್ರಿಗಳನ್ನು ಯಾರು ಬಿಸಾಡಿರುವುದು ಎಂಬುದು ತಿಳಿದು ಬಂದಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಸ್ಥಳೀಯರೆಲ್ಲಾ ಸೇರಿ ಪ್ರಾರ್ಥನೆ ನೆರವೇರಿಸಿ ಪೂಜಾ ಸಾಮಾಗ್ರಿಗಳನ್ನು ಬಿಸಾಡಿರುವ ಕುರಿತು ಗೊತ್ತಾಗಬೇಕು ಎಂದು ದೇವರ ಮುಂದೆ ಹೇಳಿಕೊಂಡು ಪೂಜಾ ಸಾಮಾಗ್ರಿಗಳನ್ನು ನದಿಯಿಂದ ಮೇಲಕೆತ್ತಿದರು.
ಸ್ವಲ್ಪ ಹೊತ್ತಿನಲ್ಲಿ ಈ ವಿಚಾರ ತಿಳಿದ ರಾಮಣ್ಣ ನಾಯ್ಕ ಎಂಬವರು ಸ್ಥಳಕ್ಕಾಗಮಿಸಿ ಪೂಜಾ ಪರಿಕರಗಳನ್ನು ತಾನೇ ನದಿಗೆ ಬಿಸಾಡಿರುವುದಾಗಿ ಹೇಳಿಕೊಂಡರು. ತನ್ನ ಅಣ್ಣ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದು, ಆ ಮನೆಯಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ. ಆದರೆ ಅವರ ನಿಧನದ ನಂತರ ವಾರಸುದಾರರಿಲ್ಲದ ಕಾರಣ ಮನೆಯಲ್ಲೇ ಉಳಿದುಕೊಂಡ ಹಳೆಯ ಪೂಜಾ ಸಾಮಾಗ್ರಿಗಳ ಬಗ್ಗೆ ಪ್ರಶ್ನಾ ಚಿಂತಕರಲ್ಲಿ ಕೇಳಿದಾಗ ಅವರದನ್ನು ನದಿಯಲ್ಲಿ ಬಿಡುವಂತೆ ಹೇಳಿದ ಮೇರೆಗೆ ನದಿಗೆ ಬಿಟ್ಟಿರುವುದಾಗಿ ರಾಮಣ್ಣ ನಾಯ್ಕ ವಿವರಿಸಿದರು.
ಬಳಿಕ ಜನರು ನದಿಯಿಂದ ಎತ್ತಿ ದಡಕ್ಕೆ ತಂದಿದ್ದ ಪೂಜಾ ಸಾಮಾಗ್ರಿಗಳನ್ನು ಸ್ವತಃ ರಾಮಣ್ಣ ನಾಯ್ಕ ಅವರು ಮರಳಿ ಮನೆಗೆ ಕೊಂಡೊಯ್ದಿದ್ದಾರೆ. ಆ ಬಳಿಕವಷ್ಟೇ ಅಲ್ಲಿದ್ದ ಕಾಳಿಂಗಸರ್ಪ ಸ್ಥಳದಿಂದ ತೆರಳಿತು ಎಂದು ತಿಳಿದು ಬಂದಿದೆ.