ಸಮಗ್ರ ನ್ಯೂಸ್: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್ (ORS) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ.ದಿಲೀಪ್ ಮಹಲ್ ನಬೀಸ್ (87) ಭಾನುವಾರ ಕೋಲ್ಕತ್ತದಲ್ಲಿ (Kolkata) ನಿಧನರಾದರು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ದಿಲೀಪ್ ಅವರನ್ನು 2 ವಾರಗಳ ಹಿಂದೆ ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪ್ರತಿಷ್ಠಿತ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರೂ ಆಗಿದ್ದ ಡಾ. ದಿಲೀಪ್ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್ ತನ್ನ ವರದಿಯಲ್ಲಿ ತಿಳಿಸಿತ್ತು.
ನೊಬೆಲ್ ಪುರಸ್ಕಾರಕ್ಕೆ ಅರ್ಹರಾಗಿದ್ದ ಈ ವೈದ್ಯರಿಗೆ, ಕನಿಷ್ಠ ಭಾರತ ಸರ್ಕಾರ ಕೂಡಾ ಯಾವುದೇ ಪದ್ಮ ಪ್ರಶಸ್ತಿಯನ್ನೂ ಇದುವರೆಗೆ ನೀಡಿಲ್ಲದಿರುವುದು ವಿಪರ್ಯಾಸ.