ಸಮಗ್ರ ನ್ಯೂಸ್: ಮಂಗಳೂರು ಬಳಿಯ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಟೋಲ್ ಗೇಟ್ ಕಿತ್ತುಹಾಕಲು ಸಾರ್ವಜನಿಕರು ಕರೆ ನೀಡಿರುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ಗೆ ನುಗ್ಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯತೆಗೆ ಹೆದ್ದಾರಿ 66ರಲ್ಲಿರುವ ಈ ಟೋಲ್ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದು, ಸರ್ಕಾರ ತೆಗೆದುಕೊಂಡಿದ್ದ ಅವಧಿ ಮುಗಿದಿದ್ದರಿಂದ ಇದೇ 18ರಂದು ತಾವೇ ಟೋಲ್‌ಗೇಟ್ ತೆರವುಗೊಳಿಸುವುದಾಗಿ ಹೋರಾಟಗಾರರು ಬೆದರಿಕೆ ಹಾಕಿದ್ದರು.
ಈ ನಡುವೆ, ಪೊಲೀಸರು ಹೋರಾಟಗಾರರಿಗೆ ರಾತ್ರಿ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರ ಈ ಕ್ರಮ ವಿರೋಧಿಸಿ ಪ್ರತಿಭಟನೆಯೂ ನಡೆದಿದ್ದವು. ಪೂರ್ವನಿಗದಿಯಂತೆ ಹೋರಾಟಗಾರರು ಮಂಗಳವಾರ ಈ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ, ತೆರವುಗೊಳಿಸಲು ಯತ್ನಿಸಿದರು. ಟೋಲ್‌ಗೇಟ್ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ಬಂಧಿಸಿದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಹೋರಾಟಗಾರರು ಹಾಗೂ ಪೊಲಿಸರ ನಡುವೆ ವಾಗ್ವಾದ ಸಂಘರ್ಷ ಏರ್ಪಟ್ಟಿದೆ. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬಂದ್ ಆಗಿದೆ.
ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಪ್ರಮುಖರಾದ ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್ ಮೊದಲಾದವರು ಬಂಧನಕ್ಕೆ ಒಳಗಾದರು.