ಸಮಗ್ರ ನ್ಯೂಸ್: ಕನ್ನಡದಲ್ಲಿ ಬಿಡುಗಡೆಗೊಂಡ ಬಳಿಕ, ದೇಶದ ಇತರ ಭಾಷೆಗಳಿಗೆ ಡಬ್ ಆಗಿ ಅಬ್ಬರಿಸುತ್ತಿರುವ “ಕಾಂತಾರ” ಚಿತ್ರ ಬಹುದೊಡ್ಡ ಯಶಸ್ಸು ಸಂಪಾದಿಸಿದೆ. ಅದರ ನಡುವೆ ಭಾನುವಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.
ದೇಶೀಯ ಮಣ್ಣಿನ ಸೊಗಡಿನ ಇನ್ನೊಂದು ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ಬಂದಿದ್ದರು. ಕಂಬಳ ಕ್ರೀಡೆ ಹಾಗೂ ಕರಾವಳಿ ಸಂಸ್ಕೃತಿಯನ್ನು ದೇಶ ಮಟ್ಟದಲ್ಲಿ ಪಸರಿಸಲು ಕಾಂತಾರ ಒಂದು ರೀತಿಯಲ್ಲಿ ಕಾರಣವಾಗಿದ್ದರೆ, ಸ್ಥಳೀಯವಾಗಿಯೇ ಉಳಿದುಕೊಂಡಿದ್ದ ಕಬಡ್ಡಿಗೆ ಬೂಸ್ಟ್
ನೀಡಿದ್ದು ಪ್ರೊ ಕಬಡ್ಡಿ ಲೀಗ್.
ಕಾಂತಾರದ ಯಶಸ್ಸಿನ ಬಳಿಕ ದೇಶದ ವಿವಿಧ ಪ್ರದೇಶಗಳಿಗೆ ಪ್ರಚಾರಕ್ಕೆ ಹೋಗುತ್ತಿರುವ ರಿಶಬ್ ಶೆಟ್ಟಿ, ಪಿಕೆಎಲ್ ಪಂದ್ಯಗಳಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಪ್ರತಿದಿನದ ಕಬಡ್ಡಿ ಪಂದ್ಯಗಳಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡುವುದು ಪಿಕೆಎಲ್‌ನ ವಾಡಿಕೆ. ಅದಕ್ಕೆ ಗಣ್ಯರನ್ನು, ಪ್ರಖ್ಯಾತರನ್ನು ಇದಕ್ಕಾಗಿ ಕರೆಸುತ್ತದೆ. ಇಂದಿನ ಮ್ಯಾಚ್ ಗಳಿಗೆ ಕಾಂತಾರ ಸಿನಿಮಾದ ಸೂತ್ರಧಾರಿಯಾದ ರಿಷಭ್ ಅವರಿಂದ ರಾಷ್ಟ್ರಗೀತೆ ಹಾಡಿಸಿ ಸೂಪರ್ ಸಂಡೇ ಮ್ಯಾಚ್‌ಗಳಿಗೆ ಚಾಲನೆ ನೀಡಲಾಗಿದೆ.
ನೀಲಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆಯುಟ್ಟು ಬಂದಿದ್ದ ರಿಷಬ್ ಶೆಟ್ಟಿ, ಪುಣೇರಿ ಪಲ್ಟನ್ ಹಾಗೂ ಯು ಮುಂಬಾ ನಡುವಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು. ಇದೇ ವೇಳೆ ಬೆಂಗಳೂರು ಬುಲ್ಸ್ ತಂಡಕ್ಕೂ ತಮ್ಮ ಶುಭ ಕೋರಿದರು.