ಸಮಗ್ರ ನ್ಯೂಸ್: ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸಿರುವ ಆರೋಪದಡಿ ಜೆಡಿಎಸ್ ಮುಖಂಡ ಸೇರಿದಂತೆ ಇಬ್ಬರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರಸಭಾ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಮುಸ್ತಾಫ ಅಲಿಯಾಸ್ ಮುಸ್ತು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ಲಾ ಬೆಟ್ಟಗೇರಿ ಎಂದು ಗುರುತಿಸಲಾಗಿದೆ.
ಈ ಇಬ್ಬರು ಆರೋಪಿಗಳು ನಾಲ್ಕು ತಿಂಗಳ ಹಿಂದೆ ಮೊಬೈಲ್’ನಲ್ಲಿ ಮಲೆಯಾಳ ಭಾಷೆಯಲ್ಲಿ ಮೂರು ನಿಮಿಷಗಳ ಕಾಲ ನಡೆಸಿರುವ ಸಂಭಾಷಣೆ ಇದೀಗ ವೈರಲ್ ಆಗಿದ್ದು, ಮಡಿಕೇರಿ ನಗರದ ನಿವಾಸಿ ಶೇಷಪ್ಪ ರೈ (ಪುಟ್ಟು) ಅವರು ಆಡಿಯೋ ದಾಖಲೆ ಸಹಿತ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ಲಾ ಹಾಗೂ ಶೇಷಪ್ಪ ರೈ ಆತ್ಮೀಯರಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಅಬ್ದುಲ್ಲಾ ಅವರಿಗೆ ಕರೆ ಮಾಡಿದಾಗ ಅಬ್ದುಲ್ಲಾ ಹಾಗೂ ಮುಸ್ತಾಫ ಅವರು ನಡೆಸಿರುವರೆನ್ನಲಾದ ಸಂಭಾಷಣೆ ಶೇಷಪ್ಪ ರೈ ಅವರ ಮೊಬೈಲ್’ನಲ್ಲಿ ದಾಖಲಾಗಿದೆ. ಮಲೆಯಾಳಂ ಭಾಷೆಯಲ್ಲಿ ಮೂರು ನಿಮಿಷ ಕಾಲ ನಡೆದಿರುವ ಸಂಭಾಷಣೆಯಲ್ಲಿ, ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಹಿಂದೂಗಳು ಸೇರುವ 50ಕ್ಕೂ ಅಧಿಕ ಸ್ಥಳಗಳಲ್ಲಿ ಪೆಟ್ರೋಲ್ ಬಾಂಬ್ ಹಾಕುವುದರೊಂದಿಗೆ ಹಿಂದೂಗಳ ಹತ್ಯೆಗೆ ಸ್ಕೆಚ್ ರೂಪಿಸುವ, ಮಡಿಕೇರಿ ಹೊತ್ತಿ ಉರಿಯುವಂತೆ ಮಾಡುವ,ನಾವು ಸತ್ತರೂ ಪರವಾಗಿಲ್ಲ. ಹಿಂದೂಗಳನ್ನು ಬಿಡಬಾರದು. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಅದನ್ನು ಹೇಗಾದರೂ ಕ್ರೋಢೀಕರಿಸುವ ಎಂಬಿತ್ಯಾದಿ ಸಂಭಾಷಣೆ ಈ ಆಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿದೆ.
ಈ ಆಡಿಯೋ ಸಹಿತ ಶೇಷಪ್ಪ ರೈ ಅವರು ನಗರ ಠಾಣೆಗೆ ದೂರು ನೀಡಿದ್ದು, ಇದೀಗ ಆರೋಪಿಗಳಿಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.