ಸಮಗ್ರ ನ್ಯೂಸ್: ಕನ್ನಡದ ಕಾಂತಾರ ಸಿನಿಮಾ ನಾಳೆಯಿಂದ ಹಿಂದಿಯಲ್ಲಿ 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್, ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಕೆಜಿಎಫ್ ಬಳಿಕ ಮತ್ತೊಂದು ದಾಖಲೆ ಬರೆಯಲು ಹೊಂಬಾಳೆ ಪಿಲಮ್ಸ್ ಸಜ್ಜಾಗಿದೆ.
ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಅಕ್ಟೋಬರ್ 14 ರಂದು ಹಿಂದಿಯಲ್ಲಿ, 15 ರಂದು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.
ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.