ಸಮಗ್ರ ನ್ಯೂಸ್: ಜಮೀನಿನ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಸಲು ತೆರಳಿದವರ ಮೇಲೆ ರೈತಸಂಘದ ಮುಖಂಡ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಲಿಗೆ ಗುಂಡು ತಗುಲಿದ್ದ ವ್ಯಕ್ತಿಯನ್ನು ನಾರಾಯಣ್ ರಾಜ್ ಎಂದು ಗುರುತಿಸಲಾಗಿದೆ.
ಮಾಕೋನಹಳ್ಳಿ ಗ್ರಾಮದ ರೈತ ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನ ಮನೋಜ್ ಎಂಬುವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು. ಈ ವೇಳೆ ಮನೋಜ್ ಖರೀದಿಸಿದ ಜಾಗವನ್ನ ದುಗ್ಗಪ್ಪಗೌಡ ಅವರು ಒತ್ತುವರಿ ಮಾಡಿ ಮನೆ ಕಟ್ಟಿದ್ದರು ಎಂದು ಹೇಳಲಾಗಿದೆ.
ಹಾಗಾಗಿ, ಜಮೀನು ಖರೀದಿಸಿದ ಮನೋಜ್ ಹಾಗೂ ಅದೇ ಜಮೀನು ಪಕ್ಕದ ಜಮೀನಿನ ದುಗ್ಗಪ್ಪಗೌಡರಿಗೆ ಜಮೀನು ವಿವಾದ ಕೂಡ ಇತ್ತು. ಈ ಬಗ್ಗೆ ಮಾತನಾಡಲು ದುಗ್ಗಪ್ಪಗೌಡ ಅವರ ಮನೆ ಬಳಿ ಹೋದಾಗ ಮಹಡಿ ಮೇಲೆ ನಿಂತಿದ್ದ ದುಗ್ಗಪ್ಪಗೌಡ ಕೋವಿಯಿಂದ ಮಾತುಕತೆಗೆ ಬಂದವರ ಮೇಲೆ ಗುಂಡು ಹಾರಿಸಿದ್ದಾನೆ. ನಾರಾಯಣ್‍ರಾಜ್ ಎಂಬುವರ ಕಾಲಿಗೆ ಗುಂಡು ತಗುಲಿದ್ದು ಕೂಡಲೇ ಅವರನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂಡಿಗೆರೆ ಪೊಲೀಸರು ರೈತ ಸಂಘದ ಅಧ್ಯಕ್ಷ ದುಗ್ಗಪ್ಪ ಗೌಡನನ್ನು ಬಂಧಿಸಿದ್ದಾರೆ.