ಪಿಲಿಕುಳದಲ್ಲಿ ಇರುವೆ ಕಾಟದಿಂದ‌ ಒದ್ದಾಡಿದ ಹಾವು|ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸ್ಪಷ್ಟನೆ

Ad Widget ... ..

ಸಮಗ್ರ ನ್ಯೂಸ್: ಪಿಲಿಕುಳ ಜೈವಿಕ ಉದ್ಯಾನದೊಳಗಿರುವ ಹಾವಿನ ಗೂಡೊಂದರಲ್ಲಿ ಇರುವೆಗಳ ಬಾಧೆಗೊಳಗಾಗಿರುವ ಉರಗದ ಆರೋಗ್ಯ ಸ್ಥಿರವಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Ad Widget

ಇರುವೆಗಳು ಹಾವನ್ನು ಕಚ್ಚುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರ ತಿಳಿದು ಕೂಡಲೇ ಪ್ರಾಧಿಕಾರದ ಆಯುಕ್ತರು ಸಂಬಂಧಪಟ್ಟ ಹಿರಿಯ ವೈಜ್ಞಾನಿಕ ಅಧಿಕಾರಿ, ಪಶುಪಾಲನಾ ವೈದ್ಯಾಧಿಕಾರಿ ಮತ್ತು ಬಯಾಲಾಜಿಸ್ಟ್ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಇರುವೆಗಳ ಬಾಧೆಗೆ ಒಳಗಾದ ಉರಗದ ಆರೋಗ್ಯವು ಸ್ಥಿರವಾಗಿದೆ ಎಂಬುದಾಗಿ ಪಶುಪಾಲನಾ ವೈದ್ಯಾಧಿಕಾರಿಯವರು ದೃಢೀಕರಿಸಿದ್ದಾರೆ. ಪ್ರಾಧಿಕಾರ ಆಯುಕ್ತರ ನಿರ್ದೇಶನದಂತೆ ಈ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಲುವಾಗಿ ಉರಗ ಪಾಲಕರಿಗೆ ನೋಟಿಸ್ ನೀಡಿ ವಿವರಣೆ ನೀಡಲು ತಿಳಿಸಿರುವುದಾಗಿ ಜೈವಿಕ ಉದ್ಯಾನವನದ ನಿರ್ದೇಶಕರು ತಿಳಿಸಿದ್ದಾರೆ.

ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕೂಡಲೇ ಪ್ರಾಧಿಕಾರದ ಆಯುಕ್ತರ ನೇತೃತ್ವದಲ್ಲಿ ಜೈವಿಕ ಉದ್ಯಾನವನದ ನಿರ್ದೇಶಕರು, ಹಿರಿಯ ವೈಜ್ಞಾನಿಕ ಅಧಿಕಾರಿ ಮತ್ತು ಪಶುಪಾಲನಾ ವೈದ್ಯಾಧಿಕಾರಿಯವರನ್ನು ಒಳಗೊಂಡು ವಿಶೇಷ ಸಭೆ ನಡೆಸಲಾಗಿದೆ. ಅಂತೆಯೇ ಈ ಸಭೆಯಲ್ಲಿ ಇರುವೆಗಳ ಬಾಧೆಗೊಳಗಾದ ಆ ಉರಗದ ಆರೋಗ್ಯವನ್ನು ಪ್ರತೀ 2 ಗಂಟೆಗಳಿಗೊಮ್ಮೆ ಪರಿಶೀಲನೆ ನಡೆಸಿ ವರದಿಯನ್ನು ಆಯುಕ್ತರಿಗೆ ನೀಡಲು ತಿಳಿಸಲಾಗಿದೆ.

ಜೈವಿಕ ಉದ್ಯಾನದಲ್ಲಿ ಬೇರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದಿನದ ಎಲ್ಲಾ ಅವಧಿಯಲ್ಲಿ ಉರಗ ವಿಭಾಗಕ್ಕೆ ಹೆಚ್ಚುವರಿ ಸಿಸಿ ಕ್ಯಾಮರಾವನ್ನು ಅಳವಡಿಸಿ 24*7 ಕಣ್ಗಾವಲು ಮಾಡಲು ಕ್ರಮ ಕೈಗೊಳ್ಳಲಾಗುವುದು. ಉರಗಗಳ ಆವರಣದ ಒಳಗೆ ಯಾವುದೇ ತಿಂಡಿ ತಿನಸುಗಳನ್ನು ಕೊಂಡೋಗದಂತೆ ನೋಡಿಕೊಂಡು ನಿಗಾ ವಹಿಸಲು ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಆಗಾಗ ಉರಗ ಆವರಣದ ಹೊರಭಾಗದ ಸ್ವಚ್ಛತೆ ಮಾಡಲು ಹಾಗೂ ಇದರ ಮೇಲುಸ್ತುವಾರಿಯನ್ನು ಭದ್ರತಾಧಿಕಾರಿಯವರು ನೋಡಿಕೊಂಡು ವರದಿ ನೀಡಲು ಸೂಚಿಸಲಾಗಿದೆ ಎಂದವರು ವಿವರಿಸಿದ್ದಾರೆ.

ಜೈವಿಕ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರುವಲ್ಲಿ ತಿಂಡಿ ತಿನಿಸುಗಳ ಪ್ಯಾಕೇಟುಗಳು ಪ್ಲಾಸ್ಟಿಕ್ ಬಾಟಲಿ ಇನ್ನಿತರ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಹಾಗೂ ಪ್ರಾಣಿಗಳ ಆವರಣಗಳಿಗೆ ಹಾನಿ ಉಂಟು ಮಾಡದಂತೆ, ಸಂದರ್ಶಕರಿಗೆ ಅರಿವು ಮೂಡಿಸಲು ಹೆಚ್ಚುವರಿ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *