ಸಮಗ್ರ ನ್ಯೂಸ್: ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಳೆಯಿಂದ ಪಾದಯಾತ್ರೆ ಆರಂಭವಾಯಿತು.
ಇಂದಿನ ಪಾದಯಾತ್ರೆಯ ವಿಶೇಷತೆ ಏನೆಂದರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದರು.
ಕೆಲ ದೂರ ಕಾರಿನಲ್ಲಿ ಬಂದ ಸೋನಿಯಾ ಗಾಂಧಿ ಅವರು ಜಕ್ಕನಹಳ್ಳಿ ಬಳಿ ಪಾದಯಾತ್ರೆ ಸೇರಿಕೊಂಡರು. ಅವರ ಎಡ ಮತ್ತು ಬಲದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಾಥ್ ನೀಡಿದರು. ಅಲ್ಲದೆ, ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ರೂಪಕಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸೋನಿಯಾ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದರು.
ಸುಮಾರು ಹದಿನೈದು ನಿಮಿಷಗಳ ಕಾಲ ಒಂದು ಕಿ.ಮೀ ನಡೆದ ಸೋನಿಯಾ ಗಾಂಧಿ ಅವರು ಪಾದಯಾತ್ರೆಯಿಂದ ತೆರಳಿ, ಮತ್ತೆ ತಮ್ಮ ಕಾರನ್ನೇರಿದರು.
ಪಾದಯಾತ್ರೆಯ ನಡುವೆ ಅಮ್ಮಾಸ್ ಹೊಟೇಲ್ಗೆ ತೆರಳಿದ ಸೋನಿಯಾ, ರಾಹುಲ್ ಹಾಗೂ ರಾಜ್ಯ ನಾಯಕರು ತಿಂಡಿ ತಿಂದು, ಟೀ ಮತ್ತು ಕಾಫಿ ಸವಿದರು.