ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಮಾಂಸಾಹಾರ’ ತಿನ್ನುವವರಿಗೆ ಒಂದು ಸಲಹೆ ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ‘ನಾವು ತಿನ್ನುವ ಆಹಾರ ನಮ್ಮ ಮನಸಿನ ಮೇಲೆ ಪ್ರಭಾವ ಬೀರುತ್ತದೆ. ನೀವು ಆಹಾರ ಕ್ರಮದಲ್ಲಿ ತಪ್ಪಿದರೆ, ಜೀವನದಲ್ಲೂ ತಪ್ಪು ದಾರಿಯಲ್ಲೇ ಸಾಗುತ್ತೀರಿ. ಅತ್ಯಂತ ಹೆಚ್ಚಾಗಿ ಮಾಂಸಾಹಾರವನ್ನೇ ಒಳಗೊಂಡಿರುವ ತಾಮಸ ಆಹಾರಗಳನ್ನು ಆದಷ್ಟು ಕಡಿಮೆ ತಿನ್ನಬೇಕು. ತ್ಯಜಿಸಿದರೂ ತೊಂದರೆಯಿಲ್ಲ.
ಪಾಶ್ಚಾತ್ಯ ದೇಶಗಳಲ್ಲಿ ಜನರು ಮಾಂಸಾಹಾರ ತಿನ್ನುವಂತೆ ನಮ್ಮ ದೇಶದಲ್ಲಿಯೂ ಮಾಂಸ ಸೇವನೆ ಮಾಡುವ ಮಂದಿ ಅನೇಕರು ಇದ್ದಾರೆ. ಆದರೆ ಇಲ್ಲಿನ ಅನೇಕರು ಈಗಾಗಲೇ ಹಲವು ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮಾಂಸಾಹಾರ ಸೇವನೆ ಮಾಡುವುದಿಲ್ಲ ಎಂದು ಹೇಳುವವರೂ ಅನೇಕರು ಇದ್ದಾರೆ.
ಈ ಶಿಸ್ತನ್ನು ಎಲ್ಲರೂ ಪಾಲಿಸುವಂತಾಗಬೇಕು. ಮಾಂಸಾಹಾರ ಸೇವನೆಯಲ್ಲಿ ನಿಯಮ ಅನುಸರಿಸಿದರೆ, ಮನಸೂ ಶಾಂತವಾಗಿ, ನೆಮ್ಮದಿಯಿಂದ ಇರುತ್ತದೆ. ಏಕಾಗ್ರತೆಯನ್ನೂ ಸಾಧಿಸಬಹುದು’ ಎಂದು ಮೋಹನ್ ಭಾಗವತ್ ವಿಶ್ಲೇಷಿಸಿದ್ದಾರೆ.