ಸಮಗ್ರ ನ್ಯೂಸ್: ಭಾರತದಲ್ಲಿ ಇಂದು 5ಜಿ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಮೂಲಕ ಇಂದಿನಿಂದ ಭಾರತವು ಇಂಟರ್ನೆಟ್ ನ 5G ಯುಗವನ್ನು ಪ್ರವೇಶಿಸಲಿದೆ. ಇದರಿಂದ ಜನರು ಎದುರಿಸುತ್ತಿರುವ ಇಂಟರ್ನೆಟ್ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಅಕ್ಟೋಬರ್ 1) ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಮೋದಿ 5G ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಕೆ ಆರಂಭವಾಗಿದೆ. ಜಿಯೋ, ಏರ್ಟೆಲ್ ಮುಂದಿನ ದಿನಗಳಲ್ಲಿ 5ಜಿ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.
ದೂರದರ್ಶನ ಮತ್ತು ಇತರ ಪ್ರಮುಖ ಸುದ್ದಿ ವಾಹಿನಿಗಳಲ್ಲಿ 5ಜಿ ಇಂಟರ್ನೆಟ್ ಸೇವೆಯ ಉದ್ಘಾಟನಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಆಸಕ್ತರು ಅಲ್ಲಿ 5G ಯ ಲೈವ್ ಅಪ್ಡೇಟ್ಗಳನ್ನು ಪಡೆಯಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ನ 6ನೇ ಆವೃತ್ತಿಯನ್ನು ಉದ್ಘಾಟಿಸಿದ್ದಾರೆ. ಇಂದು ದೆಹಲಿಯ ದ್ವಾರಕಾ ಸೆಕ್ಟರ್ 25ರಲ್ಲಿ ದೆಹಲಿ ಮೆಟ್ರೋ ನಿಲ್ದಾಣದ ಭೂಗತ ಸುರಂಗದಿಂದ 5G ಸೇವೆಗಳ ಕೆಲಸವನ್ನು ಪ್ರಧಾನ ಮಂತ್ರಿಗೆ ಪ್ರದರ್ಶಿಸಲಾಯಿತು. 5G ತಂತ್ರಜ್ಞಾನದ ಸಹಾಯದಿಂದ ಯಾವುದೇ ಅಡಚಣೆಯಿಲ್ಲದೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಬಹುದು. ತಂತ್ರಜ್ಞಾನ ಲೋಕದಲ್ಲಿ ಇದೊಂದು ಕ್ರಾಂತಿ ಎಂದೇ ಪರಿಗಣಿಸಲಾಗುತ್ತಿದೆ.