ಸಮಗ್ರ ನ್ಯೂಸ್: ದೇಶದಿಂದ ಅಡಿಕೆ ಬೆಳೆ ಆಮದು ಮಾಡಿಕೊಳ್ಳಲು ಇದ್ದ ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಅಡಿಕೆ ಧಾರಣೆ ಏರು ಗತಿಯಲ್ಲಿದ್ದ ಹೊತ್ತಲ್ಲೇ ಮತ್ತೊಮ್ಮೆ ದಿಢೀರ್ ಬೆಲೆ ಇಳಿಕೆಯಾಗುತ್ತಿದ್ದು, ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಕೇಂದ್ರ ವಾಣಿಜ್ಯ ಸಚಿವಾಲಯ ನಿಯಮಗಳಿಗೆ ಸಿದ್ದುಪಡಿ ತಂದು ಪ್ರತಿ ಕೆಜಿ ಅಡಿಕೆಗೆ 251 ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿ ಮಾಡಿತ್ತು. ಈಗ ಕನಿಷ್ಠ ಆಮದು ಬೆಲೆ ಇಲ್ಲದೆ ಭೂತಾನ್ ನಿಂದ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯ ಅನುಮತಿ ನೀಡಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಳಿಕೆಯಾಗಿ ಬೆಳೆಗಾರರಿಗೆ ಸಂಕಷ್ಟ ಎದುರಾಗಲಿದೆ.
ತನ್ನ ಬಳಕೆಗೆ ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಭೂತಾನ್ ದೇಶದಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಇದುವರೆಗೂ ಯಾವುದೇ ಒಂದು ದೇಶದಿಂದ ಇಷ್ಟೊಂದು ಪ್ರಮಾಣದ ಅಡಿಕೆ ಆಮದು ಮಾಡಿಕೊಂಡಿರಲಿಲ್ಲ. ಏಕಾಏಕಿ ಇಷ್ಟೊಂದು ಪ್ರಮಾಣದ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದರಿಂದ ದೇಶದಲ್ಲಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಅಡಿಕೆಯದ್ದು ಆರಂಭ ಕಾಲದಿಂದಲೂ ಇಂದಿನವರೆಗೂ ಊಹಾಧಾರಿತ ಮಾರುಕಟ್ಟೆ(Speculative Market). ಇಲ್ಲಿ ಚಿಕ್ಕ ಚಿಕ್ಕ ಊಹಾಪೋಹಗಳಿಗೆ ಬೆಲೆಯಲ್ಲಿ ಏರು ಪೇರು ಮಾಡುವ ಶಕ್ತಿ ಇದೆ. ಹಾಗಾಗಿ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಣ್ಣ ವ್ಯತ್ಯಾಸವಾದಾಗ, ಇದು ದೊಡ್ಡಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದೊಂದು ಸೂಕ್ಷ್ಮ ಮಾರುಕಟ್ಟೆಯಾಗಿರುವುದರಿಂದ ಇಂಥ ಸಣ್ಣ ಸಣ್ಣ ತಲ್ಲಣಗಳು ದೊಡ್ಡ ವ್ಯತ್ಯಾಸಗಳನ್ನು ತರುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಆಮದಿನ ಹಿನ್ನೆಲೆಯಲ್ಲಿ ಚರ್ಚಿಸುವಾಗ, ಈ ಊಹಾಧಾರಿತ ಮಾರುಕಟ್ಟೆ ಎಂಬ ವಾಸ್ತವವನ್ನು ಮರೆಯುವ ಹಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡಾಗ ಉಳಿದ ಸಾಧ್ಯತೆಗಳೂ ನಮಗೆ ಹೆಚ್ಚು ಅರ್ಥವಾಗುತ್ತವೆ ಎನ್ನುತಾರೆ ಹಿರಿಯ ಪತ್ರಕರ್ತ ಹಾಗೂ ಕೃಷಿ ಲೇಖಕ ಶ್ರೀಪಡ್ರೆ.