ಸಮಗ್ರ ನ್ಯೂಸ್: ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರ ಸಮ್ಮುಖದಲ್ಲಿ ಅಥಣಿ ತಾಲೂಕಾಡಳಿತದ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಕೋಟಿ ವೃಕ್ಷ ಅಭಿಯಾನ ನಡೆಸಲಾಯಿತು. ಸ್ವಾತಂತ್ರದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕಳೆದ ತಿಂಗಳು ನೆಡಲಾಗಿದ್ದ 75 ಗಿಡಗಳಲ್ಲಿ ಇಂದು ಒಂದೂ ಗಿಡವೂ ಜೀವಂತ ಇಲ್ಲದಿರುವುದು ನೋಡಿದರೆ ಕೇವಲ ಪೊಟೊ ಶೋಕಿಗಾಗಿ ತೋಟಗಾರಿಕೆ ಇಲಾಖೆಯವರು ಈ ಅಭಿಯಾನ ಹಮ್ಮಿಕೊಂಡಿದ್ರಾ ? ಎಂದು ಜಿಜ್ಞಾಸೆ ಮೂಡುತ್ತಿದೆ.

ಇಡೀ ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕು ಆಡಳಿತ ಅಥಣಿ, ತೋಟಗಾರಿಕೆ ಇಲಾಖೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೋಟಿ ವೃಕ್ಷ ಅಭಿಯಾನದ ನಿಮಿತ್ತ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಹೊರವಲಯದ ಬಾಂದಾರಗೆ ಹೊಂದಿಕೊಂಡಂತೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ 75 ಗಿಡಗಳನ್ನು ನೆಟ್ಟು ಕಾರ್ಯಕ್ರಮ ಮಾಡಿದ್ದರು.
ಆ ಗಿಡನೆಟ್ಟು ಇಂದಿಗೆ ಒಂದು ತಿಂಗಳೂ ಕಳೆದಿಲ್ಲ. ಅಷ್ಟರಲ್ಲಿ ಪರಿಶೀಲಿಸಿದಾಗ ಒಂದು ಗಿಡವೂ ಜೀವಂತವಾಗಿಲ್ಲ, ಕನಿಷ್ಠ ಪಕ್ಷ ಗಿಡಗಳಿಗೆ ಒಂದು ಹನಿ ನೀರು ಹಾಕುವ ಪ್ರಯತ್ನವನ್ನೂ ಕೂಡಾ ಮಾಡೇ ಇಲ್ಲ, ದನ ಕರು ತಿನ್ನಬಾರದೆಂದು ರಕ್ಷಣೆ ಮಾಡುವುದಂತೂ ದೂರದ ಮಾತಾಗಿದೆ. ಇಷ್ಟೆಲ್ಲ ನಿರ್ಲಕ್ಷ್ಯ ನೋಡಿದರೆ, ಕಾಟಾಚಾರಕ್ಕೆ ಸಾರ್ವಜನಿಕರ ಹಣವನ್ನು ಪೋಲು ಮಾಡಿ ಈ ಕಾರ್ಯಕ್ರಮ ಮಾಡಿ ಪೊಟೊಶೋಕಿ ಮಾಡುವ ಅಗತ್ಯವಿತ್ತೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಅಮೃತ ಮಹೋತ್ಸವ ನಿಮಿತ್ತ ಮಾಡಿರುವ ಕಾರ್ಯಕ್ರಮ ಕೇವಲ ಪೊಟೊಶೋಕಿಗೆ ಆಗದಿರಲಿ, ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತು ತೋಟಗಾರಿಕೆ ಇಲಾಖೆ ಹಾಗೂ ತಾಲೂಕಾಡಳಿತದವರು ವರ್ತಿಸಲಿ ಎಂದು ಸಾರ್ವಜನಿಕರು ಹೇಳಿದ್ದಾರೆ.