ಸಮಗ್ರ ನ್ಯೂಸ್: ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿದ ಬಳಿಕ, ಅದರ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) ಮೇಲೆ ಚುನಾವಣಾ ಆಯೋಗ ಹದ್ದಿನಗಣ್ಣು ಇಟ್ಟಿದೆ ಎಂದು ತಿಳಿದುಬಂದಿದೆ.
ಪಿಎಫ್‌ಐ ಹಾಗೂ ಅದರ ಜತೆ ನಿಕಟವಾಗಿರುವ ಹಲವು ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಪ್ರಕಟಣೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಎಸ್‌ಡಿಪಿಐ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಕಡೆ ಸಕ್ರಿಯವಾಗಿರುವ ಕಾರ್ಯಕರ್ತರ ಕಾನೂನುಪಾಲನಾ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಲಿವೆ. ಈಗಾಗಲೇ ಹಲವು ಎಸ್‌ಡಿಪಿಐ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೂ ಪೊಲೀಸ್ ದಾಳಿ ನಡೆದಿವೆ.
ಎಸ್‌ಡಿಪಿಐ ಮೇಲೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲದಿರಲು ಕಾರಣವೆಂದರೆ ಅದು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಒಂದು ರಾಜಕೀಯ ಪಕ್ಷವಾಗಿರುವುದು. ಸಂವಿಧಾನಕ್ಕೆ ನಿಷ್ಠೆಯನ್ನು ಅದು ಘೋಷಿಸಿದೆ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದೆ, ಹಲವು ಕಡೆ ಗೆದ್ದೂ ಇದೆ. ಇದರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಕಿದ್ದರೂ ಅದು ಚುನಾವಣಾ ಆಯೋಗದಿಂದಲೇ ಆಗಬೇಕಿದೆ. ಗೃಹ ಸಚಿವಾಲಯ ಸಾಕಷ್ಟು ಸಾಕ್ಷ್ಯ ಒದಗಿಸಿದರೆ ಚುನಾವಣಾ ಆಯೋಗ ಎಸ್‌ಡಿಪಿಐ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಅಂದರೆ, ಅದರ ನೋಂದಣಿಯನ್ನು ರದ್ದುಪಡಿಸಬಹುದು.
ಪಿಎಫ್‌ಐ ನಿಷೇಧ ಪ್ರಕಟಣೆಯಲ್ಲೇ ಇದರ ಬಗ್ಗೆ ಗೃಹ ಸಚಿವಾಲಯ ಸುಳಿವು ನೀಡಿದೆ. “ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳು.ʼʼ ಎಂದು ಉಲ್ಲೇಖಿಸಿದೆ. ಎಂಟು ಸಂಘಟನೆಗಳನ್ನು ಹೆಸರಿಸಿದೆ. ಆದರೆ ಅಂಗಸಂಸ್ಥೆ ಎಂಬ ಪದದ ವ್ಯಾಪ್ತಿ ಎಸ್‌ಡಿಪಿಐಯನ್ನೂ ವ್ಯಾಪಿಸಬಹುದಾಗಿದೆ. ಪಿಎಫ್‌ಐ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಎಸ್‌ಡಿಪಿಐ ಮುಖಂಡರನ್ನು ವಶಕ್ಕೆ ಪಡೆಯುವ, ವಿಚಾರಿಸುವ ಅಧಿಕಾರ ಈಗ ಕಾನೂನುಪಾಲನ ಸಂಸ್ಥೆಗಳಿಗೆ ದತ್ತವಾಗಿದೆ.
ವಾಸ್ತವವಾಗಿ ಎಸ್‌ಡಿಪಿಐ ಈಗಾಗಲೇ ಚುನಾವಣಾ ಆಯೋಗದ ರೇಡಾರ್ ಕೆಳಗಿದೆ. 2018-19 ಹಾಗೂ 2019-20ರ ದೇಣಿಗೆಯ ವರದಿಗಳನ್ನು ಅದು ಆಯೋಗಕ್ಕೆ ಸಲ್ಲಿಸಲು ವಿಫಲವಾಗಿದೆ. 2020-21ರಲ್ಲಿ ಎಸ್‌ಡಿಪಿಐ ಆದಾಯ 2.9 ಕೋಟಿಗಳಷ್ಟಿದ್ದರೂ, ಅದು 22 ಲಕ್ಷದ ಲೆಕ್ಕ ಮಾತ್ರ ನೀಡಿದೆ, ಅದೂ ದಾನಿಗಳ ಗುರುತು ನೀಡಿಲ್ಲ. 2018ರಿಂದ 21ರ ನಡುವೆ ಕೇರಳದಿಂದ 10 ಕೋಟಿ ರೂ.ಗಳನ್ನು ಅದು ಸಂಗ್ರಹಿಸಿದೆ. ಪಿಎಫ್‌ಐ ಕೇರಳದಲ್ಲಿ ಅತ್ಯಧಿಕ ಸಕ್ರಿಯವಾಗಿದೆ ಎಂಬುದನ್ನು ಗಮನಿಸಬಹುದು.