ಸಮಗ್ರ ನ್ಯೂಸ್: ಹೇಳುವುದಕ್ಕೆ ಅದೊಂದು ಸುಂದರ ಪಾರ್ಕ್. ಸುಳ್ಯ ನಗರದ ತುತ್ತತುದಿಯಲ್ಲಿ ಕಳಶಪ್ರಾಯದಂತಿರುವ ಈ ಪಾರ್ಕ್ ನಲ್ಲಿ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಗುಟ್ಕಾ, ಮದ್ಯ ಸೇವಿಸಿ ತೂರಾಡಲು ಬರುವವರ ಮಧ್ಯೆ ಸಭ್ಯಸ್ಥರು, ಮಹಿಳೆಯರು ಈ ಪಾರ್ಕ್ ಗೆ ಎಂಟ್ರಿಕೊಡಲು ಹಿಂದೆ ಮುಂದೆ ನೋಡ್ತಾರೆ. ಎಲ್ಲಾ ಗೊತ್ತಿದ್ದರೂ ಈ ಪಾರ್ಕ್ ನ ಉಸ್ತುವಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ ಎಂಬಂತಿದ್ದಾರೆ.
ಸುಳ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುರುಂಜಿಗುಡ್ಡದ ಉದ್ಯಾನವು ಮಾದಕ,ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ.
ಕುರುಂಜಿಗುಡ್ಡೆ ಪಾರ್ಕ್ ಗೆ ಸುಳ್ಯ ನಗರದ ಕುರುಂಜಿಭಾಗ್ , ತಾಲೂಕು ಕಚೇರಿ ಹಾಗೂ ನ್ಯಾಯಾಲಯದ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಹೋದರೆ ಕುರುಂಜಿಗುಡ್ಡದ ಉದ್ಯಾನ ತಲುಪ ಬಹುದು. ಇದೊಂದು ಚಿಕ್ಕದಾದ ಉದ್ಯಾನವನವಾಗಿದ್ದು, ಇಲ್ಲಿ ವಿಶ್ರಾಂತಿಗಾಗಿ ಹಲವಾರು ಜನ ಬಂದು ಹೋಗುತ್ತಾರೆ. ಚಿಕ್ಕ ಮಕ್ಕಳಿಗೆ ಆಟವಾಡಲು ಜಾರು ಬಂಡಿ, ತೂಗುಯ್ಯಾಲೆಗಳಿವೆ. ಹಾಗೇ ಪಕ್ಕದಲ್ಲಿ ಬ್ಯಾಡ್ಮಿಟನ್ ಕೋರ್ಟ್ ಇದೆ. ಹಾಗಾಗಿ ಇಲ್ಲಿ ಹಲವಾರು ಜನ ಬಂದು ಹೋಗುತ್ತಾರೆ. ಆದರೆ ಇಲ್ಲಿಗೆ ಭೇಟಿ ನೀಡುವ ಜನರಲ್ಲಿ ಬಹುತೇಕ ಯುವಜನತೆ ಇದ್ದು, ಅದರಲ್ಲೂ ಮಾದಕ ವ್ಯಸನಿಗಳೇ ಹೆಚ್ಚು. ಇದರಿಂದಾಗಿ ಸಭ್ಯಸ್ಥರಿಗೂ ತೊಂದರೆಯಾಗಿದೆ.
ಈ ಪಾರ್ಕ್ ಗೆ ಸರಿಯಾದ ಆವರಣ ಗೋಡೆಯ ಇಲ್ಲ, ಇದರ ನಿರ್ವಹಣೆಗೆ ಜನರಿಲ್ಲ, ಸಿ.ಸಿ ಕ್ಯಾಮೆರಾ ಇಲ್ಲ, ಭೇಟಿ ಸಮಯ ಇಲ್ಲವೆ ಇಲ್ಲ. ಹೂ ತೋಟದ ಪಕ್ಕ ಬೀದಿ ದೀಪ ಬಿಟ್ಟರೆ ಸುತ್ತ ಮುತ್ತ ಸಂಪೂರ್ಣ ಕತ್ತಲು.
ಹಾಗಾಗಿ ಸಂಜೆ ಹೊತ್ತಲ್ಲಿ ಸುಂದ ವಾತವರಣವನ್ನು ಸವಿಯಲು ಬಂದವರಿಗೆ ಬರುವುದೇ ಗಾಂಜಾದ ಅಮಲು. ಸುತ್ತಲೂ ನೋಡಿದರೆ ಬೀಯರ್ ಬಾಟಲ್, ಸಿಗರೇಟ್, ಗುಟ್ಕಾ ಪ್ಯಾಕೆಟ್ ಗಳು ಇನ್ನೂ ಸುತ್ತಲು ಪೊದೆಗಳು. ಇದೊಂದು ಸಾರ್ವಜನಿಕ ಉದ್ಯಾನವನ ವಾಗಿ ಈ ರೀತಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರು ಇದ್ದನ್ನು ಕೇಳುವವರೇ ಇಲ್ಲ.
ಈ ಪಾರ್ಕ್ ನ ಪಕ್ಕದಲ್ಲೇ ಕೋಟಿ ರೂ ಖರ್ಚು ಮಾಡಿ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲಾಗಿದೆ. ಸಂಜೆ ವೇಳೆಗೆ ಕೆಲವು ಬಾಲಕಿಯರು, ಮಕ್ಕಳು ಆಡಲು ಬರ್ತಾರೆ. ಅವರೆಲ್ಲರೂ ಈ ಪಾರ್ಕ್ ದಾಟಿಯೇ ಹೋಗಬೇಕು. ಆದರೆ ಇಲ್ಲಿಯ ಅನೈತಿಕ ಚಟುವಟಿಕೆಗಳು ಇವರಿಗೆಲ್ಲಾ ಭಯ ಹುಟ್ಟಿಸುತ್ತದೆ. ಗಾಂಜಾ, ಮದ್ಯದ ಅಮಲಿನಲ್ಲಿ ತೇಲಾಡುವ ಮಂದಿ ಅನೈತಿಕ ಕೃತ್ಯವನ್ನು ಎಸಗುವ ಭಯ ಕಾಡುತ್ತದೆ.
ಪಾರ್ಕ್ ನ ಈ ಅವಸ್ಥೆ ಸುಳ್ಯ ಪೊಲೀಸರಿಗೂ, ನಗರ ಪಂಚಾಯತ್ ಗೂ ತಿಳಿದಿಲ್ಲವೆಂದಲ್ಲ. ಆದರೆ ಇವರ್ಯಾರು ಈ ಕುರಿತಂತೆ ಚಿಂತಿಸದಿರುವುದು ವಿಪರ್ಯಾಸ. ಪರಿಸ್ಥಿತಿ ಗೊತ್ತಿದ್ದೂ ಗೊತ್ತಿಲ್ಲದ ರೀತಿಯ ವರ್ತನೆಯಿಂದ ಮುಂದೊಮ್ಮೆ ಈ ಭಾಗದಲ್ಲಿ ದೆಹಲಿಯ ನಿರ್ಭಯಾ ಮಾದರಿ ಪ್ರಕರಣ ನಡೆದರೂ ಆಶ್ಚರ್ಯವೇನಿಲ್ಲ. ಆಗಂತೂ ನಗರ ಪಂಚಾಯತ್ ಹಾಗೂ ಸುಳ್ಯ ಪೊಲೀಸರು ಭಾರೀ ಬೆಲೆ ತೆರಬೇಕಾಗಬಹುದು. ಆದ್ದರಿಂದ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.
ಇಲ್ಲೇ ನಡೆಯುತ್ತಾ ಬರ್ತ್ ಡೇ ಪಾರ್ಟಿ, ಎಣ್ಣೆ ಪಾರ್ಟಿ!!?
ಇದೇ ಪಾರ್ಕ್ ನ ಆವರಣದಲ್ಲಿ ಒಂದು ಪೂರ್ತಿಗೊಳ್ಳದ ಕಟ್ಟಡವಿದ್ದು ಈ ಕಟ್ಟಡವು ಅಕ್ರಮ ಚಟುವಟಿಕೆಗೆ ಸಾಥ್ ನೀಡುವಂತಿದೆ. ಇಲ್ಲಿ ಬರ್ತ್ ಡೆ ಪಾರ್ಟಿ, ಎಣ್ಣೆ ಪಾರ್ಟಿ ಸೇರಿದಂತೆ ಎಲ್ಲಾ ಪಾರ್ಟಿಗಳು ನಡೆಯುತ್ತಿರುವ ಕುರುಹುಗಳು ಕಂಡುಬರುತ್ತಿದೆ. ಈ ಕಟ್ಟಡವನ್ನು ಪೂರ್ಣಗೊಳಿಸದೆ ಬಿಟ್ಟಿರುವುದು ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ.
ಒಟ್ಟಾರೆ ಸುಳ್ಯ ನಗರದಲ್ಲಿ ಅನೈತಿಕ, ಅಕ್ರಮ ಚಟುವಟಿಕೆ ನಡೆಯದಂತೆ ಗಮನಹರಿಸಿ ಇದೇ ರೀತಿ ಬೇರೆ ಸ್ಥಳಗಳಿದ್ದರು ಅಲ್ಲಿ ಕೂಡ ಸರಿಯಾದ ಕ್ರಮ ಕೈಗೊಂಡು ಸುಳ್ಯವನ್ನು ಸ್ವಚ್ಛ ನಗರವನ್ನಾಗಿಸಿ.
‘ನಮಗೆ ಸಂಜೆ ವೇಳೆ ಮಕ್ಕಳನ್ನು ಕರೆದುಕೊಂಡು ಬರಲು ಭಯವಾಗುತ್ತೆ. ಮೊದಲು ಚೆನ್ನಾಗಿದ್ದ ಪಾರ್ಕ್ ಈಗ ಈ ರೀತಿಯಲ್ಲಿ ಇರುವುದು ಬೇಸರ, ಆತಂಕ ತಂದಿದೆ’- ಸ್ಥಳೀಯ ಮಹಿಳೆ