ಸುರತ್ಕಲ್: ಇಲ್ಲಿನ “ಭಾರ್ಗವಿ ಫೈನಾನ್ಸ್” ಮಾಲಕ ಮತ್ತು ಆತನ ಪತ್ನಿ ಪರಿಸರದ ಜನರಿಗೆ ಕೋಟ್ಯಂತರ ರೂಪಾಯಿಗೂ ಅಧಿಕ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದ್ದು ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸುರತ್ಕಲ್ ನಿವಾಸಿ ದೀಪಕ್ ಶೆಟ್ಟಿ ಎಂಬವರು ದೂರು ನೀಡಿದ್ದು, ಸುರತ್ಕಲ್ ನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್, ಪತ್ನಿ ವಿದ್ಯಾವತಿ ಭಟ್, ಮಗಳು ಪ್ರಿಯಾಂಕಾ ಭಟ್ ಪ್ರಕರಣದ ಆರೋಪಿಗಳು. ಇವರ ವಿರುದ್ಧ ಸೆನ್ ಅಪರಾಧ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಭಾರ್ಗವಿ ಫೈನಾನ್ಸ್ ನಲ್ಲಿ ಮೊದಮೊದಲು 50 ಸಾವಿರ ರೂ. ಚಿಟ್ ಫಂಡ್ ಇಡುತ್ತಿದ್ದು ನಂತರ ಲಕ್ಷ ಹಣವನ್ನು ಫಂಡ್ ಹೆಸರಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದು ಮುಂದುವರಿದು 20 ಲಕ್ಷ, 30 ಲಕ್ಷದವರೆಗೆ ಫಂಡ್ ಇಡುತ್ತಿದ್ದು ಇದಕ್ಕಾಗಿ ಪರಿಸರದ ಹೋಟೆಲ್, ಅಂಗಡಿ ಮಾಲಕರು, ಉದ್ಯಮಿಗಳು, ವ್ಯಾಪಾರಿಗಳು ತಾವು ದುಡಿದ ಲಕ್ಷಾಂತರ ರೂ. ಹಣವನ್ನು ಕಟ್ಟುತ್ತಾ ಬಂದಿದ್ದರು. ಪ್ರತೀ ಬಾರಿಯೂ ಫಂಡ್ ಹಣವನ್ನು ಕೊನೆಗೆ ತೆಗೆಯಿರಿ ಎನ್ನುತ್ತಿದ್ದ ಆರೋಪಿಗಳು ಹಣವನ್ನು ಚೆಕ್ ಮುಖಾಂತರ ಸ್ವೀಕರಿಸದೆ ನಗದು ಮೂಲಕವೇ ಸ್ವೀಕರಿಸುತ್ತ ಬಂದಿದ್ದು ವಂಚನೆಗೆ ಮೊದಲೇ ನಿರ್ಧರಿಸಿದ್ದರು ಎಂದು ಸಂತ್ರಸ್ತರು ಪತ್ರಿಕೆಗೆ ದೂರಿದ್ದಾರೆ.
ಅಶೋಕ್ ಭಟ್ ಎಂಟು ತಿಂಗಳ ಹಿಂದೆ ಸುರತ್ಕಲ್ ನಲ್ಲಿನ ಫೈನಾನ್ಸ್ ಮುಚ್ಚಿದ್ದು ಕಟೀಲು ಬಳಿ ಹೊಸದಾಗಿ ಫೈನಾನ್ಸ್ ತೆರೆದಿದ್ದಾನೆ. ಕಟೀಲು, ಕಿನ್ನಿಗೋಳಿ ಭಾಗದಲ್ಲೂ ಇದೇ ರೀತಿ ಹಲವರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದ್ದು ಈ ಕುರಿತು ಇನ್ನಷ್ಟೇ ದೂರು ದಾಖಲಾಗಬೇಕಿದೆ.
ಅಶೋಕ್ ಭಟ್ ಸುರತ್ಕಲ್ ಭಾಗದಲ್ಲಿ ನೂರಾರು ಮಂದಿಗೆ 2500 ರೂ. ನಿಂದ ಹಿಡಿದು 70 ಲಕ್ಷದವರೆಗೆ ಪಂಗನಾಮ ಹಾಕಿದ್ದಾನೆ. ಪ್ರತೀ ಬಾರಿ ಯಾವುದೇ ದಾಖಲೆ ಉಳಿಯದಂತೆ ಎಚ್ಚರಿಕೆ ವಹಿಸಿದ್ದು ಪತ್ನಿ, ಮಗಳನ್ನು ಮುಂದಿಟ್ಟು ಗೋಲ್ ಮಾಲ್ ನಡೆಸುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ. ಫಂಡ್ ಅವಧಿ ಮುಗಿಯುತ್ತ ಬಂದರೂ ಹಣ ಕೊಡದಿರುವುದನ್ನು ಪ್ರಶ್ನಿಸಿದಾಗ ಫೈನಾನ್ಸ್ ಹಣ ಕಲೆಕ್ಷನ್ ಮಾಡುತ್ತಿದ್ದ ಶಿಬರೂರು ನಿವಾಸಿ ಯಕ್ಷತ್ ಎಂಬಾತನ ಹೆಸರನ್ನು ಹೇಳುತ್ತಾ ಆತ ಹಣ ಕೊಡದೆ ವಂಚಿಸಿದ್ದಾಗಿ ಸುಳ್ಳು ಹೇಳುತ್ತಿದ್ದ. ಹೀಗೆ ವರ್ಷಗಳ ಕಾಲ ಯಾಮಾರಿಸುತ್ತ ಬಂದಿದ್ದು ಅಂತಿಮವಾಗಿ ಹಣ ಕಟ್ಟಿದವರು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಡಿಪಾರು ಆಗಿದ್ದ ಕುಖ್ಯಾತ ರೌಡಿ!
ವಂಚಕ ಅಶೋಕ್ ಭಟ್ ಹಿಂದೆ ಬಿಜೆಪಿ, ಬಜರಂಗದಳ, ಹಿಂಜಾವೇ ಮತ್ತಿತರ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು 20ಕ್ಕೂ ಹೆಚ್ಚು ಕೋಮು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗೂಂಡಾ ಎಂದು ಹಣೆಪಟ್ಟಿ ಕಟ್ಟಿಕೊಂಡು ಗಡಿಪಾರು ಆಗಿದ್ದ. ಬಳಿಕ ಕಾಂಗ್ರೆಸ್ ನ ವಿಜಯಕುಮಾರ್ ಶೆಟ್ಟಿ ಅವರು ಸುರತ್ಕಲ್ ಶಾಸಕರಾಗಿದ್ದಾಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ. ಈ ಸಂದರ್ಭದಲ್ಲಿ ಆತನ ಮೇಲಿದ್ದ ಕೇಸುಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಅಶೋಕ್ ಭಟ್ ಎನ್ ಐಟಿಕೆಯಲ್ಲಿ ಜಿಮ್ ತರಬೇತುದಾರನಾಗಿದ್ದು ಆತನ ಮೇಲೆ ಮುಸ್ಲಿಂ ಯುವಕರ ತಂಡವೊಂದು ಕೊಲೆಗೆ ಯತ್ನಿಸಿತ್ತು. ಈ ಕುರಿತು ಸುರತ್ಕಲ್ ಠಾಣೆಗೆ ದೂರು ನೀಡಿದ್ದ. ಅಶೋಕ್ ಭಟ್ ಮೇಲೆ ಪಣಂಬೂರು, ಸುರತ್ಕಲ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು.
ತನಿಖೆ ಸರಿಯಾಗಿ ನಡೆದಲ್ಲಿ ರಾಜ್ಯದಲ್ಲೇ ದೊಡ್ಡ ಪ್ರಕರಣ!
ಅಶೋಕ್ ಭಟ್ ಸುರತ್ಕಲ್ ಫೈನಾನ್ಸ್ ಮೂಲಕವೇ 15 ಕೋಟಿಗೂ ಅಧಿಕ ವಂಚನೆ ಎಸಗಿದ್ದಾನೆ. ಮೈಸೂರು, ಕಟೀಲಿನಲ್ಲೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸಿದಲ್ಲಿ ರಾಜ್ಯದಲ್ಲೇ ಅತೀ ದೊಡ್ಡ ವಂಚನೆ ಪ್ರಕರಣ ಇದಾಗಲಿದೆ ಎಂದು ಸಂತ್ರಸ್ತರ ಪರವಾಗಿ ಅಜಿತ್ ಕುಮಾರ್ ಹೇಳಿದ್ದಾರೆ. ಆರೋಪಿಗಳು ನೂರಾರು ಕೋಟಿ ರೂಪಾಯಿ ವಂಚನೆ ನಡೆಸಿರುವ ಸಾಧ್ಯತೆಯಿದ್ದು ಈ ಕುರಿತು ಜಿಲ್ಲಾಧಿಕಾರಿ ಅವರಿಗೂ ದೂರು ನೀಡಲಿದ್ದೇವೆ ಎಂದರು.
ಹಣ ಕೇಳಿದರೆ ಕೊಲೆ ಬೆದರಿಕೆ!?
ಫಂಡ್ ಹಣ ವಾಪಸ್ ಕೇಳಿದರೆ ಕೊಲೆ ಬೆದರಿಕೆ ಒಡ್ದುತ್ತಿದ್ದು ಸಂತ್ರಸ್ತರ ಪರವಾಗಿ ನಿಂತಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾಗಿ ಉದಯ್ ಆಳ್ವ ಆರೋಪಿಸಿದ್ದಾರೆ. ಈಗಾಗಲೇ ಕೆಲವರನ್ನು ಮುಗಿಸಿದ್ದೇನೆ, ನನ್ನ ವಿಷಯಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎನ್ನುತ್ತಿರುವ ಅಶೋಕ್ ಭಟ್ಟನಿಂದ ನಮಗೆ ರಕ್ಷಣೆ ಬೇಕು, ಹಣ ಕೇಳಲು ಮನೆಗೆ ಹೋದಾಗ ಹಲ್ಲೆಗೆ ಮುಂದಾಗಿದ್ದಾರೆ. ಆತನ ಪತ್ನಿ, ಮಗಳು ಬೆದರಿಕೆ ಒಡ್ಡಿದ್ದು ಹಣ ಕೊಡುವುದಿಲ್ಲ ಕಮಿಷನರ್ ಗೆ ದೂರು ನೀಡಿದರೆ ಅವರೇ ಹಣ ಕೊಡುತ್ತಾರೆ, ನಾನು ಹಣ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ಹಣ ಕಳೆದುಕೊಂಡಿರುವ ಗುಣವತಿ ಎಂಬವರು ಆಳಲು ತೋಡಿಕೊಂಡರು.
ಒಟ್ಟಾರೆ ಈ ಆಶೋಕನ ಕಪಟ ನಾಟಕದಿಂದ ಹಲವರು ವಂಚನೆಗೊಳಗಾಗಿದ್ದು, ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕಿದೆ.