ಸಮಗ್ರ ನ್ಯೂಸ್: ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಹಾ ನಗರ ಸಾರಿಗೆ ಬಸ್‌ಗಳಲ್ಲಿ ಕಲ್ಪಿಸಲಾಗಿದ್ದ ರಿಯಾಯಿತಿ ಬಸ್‌ಪಾಸ್ ಸೌಲಭ್ಯ ಇದೀಗ ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು ಇ-ಆಡಳಿತ ಅಭಿವೃದ್ಧಿಪಡಿಸಿರುವ ತಂತ್ರಾಂಶ ಮೂಲಕ ಬಸ್‌ಪಾಸ್ ವಿತರಣೆ ಆಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹೋದರ ಸಂಸ್ಥೆಗಳಾದ ವಾಕರಸಾ ಸಂಸ್ಥೆ, ಕಕರಸಾ ನಿಗಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಸ ಇರುವ ನೋಂದಾಯಿತ ಕಟ್ಟಡ ಮತ್ತ ಇತರೇ ನಿರ್ಮಾಣ ಕಾರ್ಮಿಕರಿಗೆ ಉಚಿತ ಪ್ರಯಾಣ ಬಸ್‌ಪಾಸ್ ವಿತರಣೆ ಆಗಲಿದೆ. ವಿಶೇಷವೆಂದರೆ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿ ಆಗಿದ್ದರೂ ಅವರು ಇಚ್ಛಿಸುವ ಪ್ರಾರಂಭಿಕ ಸ್ಥಳದಿಂದ 7 ಹಂತಗಳ ಒಟ್ಟು (ಗರಿಷ್ಠ 45 ಕಿ.ಮೀ ) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ಕಟ್ಟಡ ಕಾರ್ಮಿಕರು ಉಚಿತ ಬಸ್‌ಪಾಸ್ ಪ್ರಯಾಣವನ್ನು ಕೇವಲ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪಾಸ್ ಅನ್ನು ಮೂರು ತಿಂಗಳಗೊಮ್ಮೆ ಕಾರ್ಮಿಕರು ನವೀಕರಿಸಿಕೊಳ್ಳುವುದು ಕಡ್ಡಾಯ. ಮರು ಅವಧಿಗೆ ಹೊಸದಾಗಿ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮೂಲಕ ಪಾಸ್ ಪಡೆಯಲು ಅವಕಾಶ ಕಲ್ಪಿಸಿದೆ.