ಸಮಗ್ರ ನ್ಯೂಸ್: ‘ಅಮ್ಮ ತಾಯೇ.. ಮಗನಾದ ರಮೇಶ, ಸೊಸೆಯಾದ ಮಂಜುಳಾ ಇವರಿಬ್ಬರ ತಿಂಗಳ ಸಂಬಳವನ್ನು ರಾಜಮ್ಮ ಬಸವರಾಜುರವರ ಕೈಗೆ ಕೊಡಬೇಕು., ಹಾಗೆ ಬುದ್ಧಿ ಕೊಡು ತಾಯೇ. ಇವರಿಬ್ಬರೂ ಮನೆ ಮಠ ಅಂತ ಪ್ರೀತಿಯಿಂದ ಮಾತನಾಡಬೇಕು ಜತಗೆ ಫೋನ್ ಮಾಡಬೇಕು.’ ಇದು ಉಕ್ಕಡದ ಮಾರಮ್ಮನಿಗೆ ಭಕ್ತೆಯೊಬ್ಬರು ಬರೆದಿರುವ ಪತ್ರದ ಒಕ್ಕಣೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಭಕ್ತರ ಹರಕೆ ಪತ್ರವು ಲಭ್ಯವಾಗಿದೆ. ದೇವರಿಗೆ ಪತ್ರ ಬರೆದ ಭಕ್ತರೊಬ್ಬರು ಬೇಡಿಕೆಗಳ ಪಟ್ಟಿಯನ್ನೇ ನೀಡಿದ್ದಾರೆ.

ಪತ್ರದಲ್ಲಿ ಏನಿದೆ?
ತಾಯಿ ನಮ್ಮವ್ವ, ಮಗನಾದ ರಮೇಶ್ ಸೊಸೆಯಾದ ಮಂಜುಳ ಸಂಬಳವನ್ನು ರಾಜಮ್ಮನ ಕೈಗೆ ಕೊಡುವಂತಾಗಲಿ. ಅತ್ತೆ-ಮಾವ, ತಂದೆ-ತಾಯಿ, ಮನೆ-ಮಠ ಅಂತ ಪ್ರೀತಿಯಿಂದ ಮಾತನಾಡಿಸಬೇಕು. ಮಂಜುಳ ಮನಸ್ಸಿನಲ್ಲಿ ರಾಜಮ್ಮ ಬಸವರಾಜು, ದೇವರಾಜು ಒಳ್ಳೆಯವರಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಪತ್ರದಲ್ಲಿ ಮುಂದುವರಿದು, ಇವರಿಬ್ಬರ ಸಂಬಳ ರಾಜಮ್ಮ ಅವರ ಕೈಗೆ ಕೊಡಬೇಕು. ಹಾಗೆ ಒಳ್ಳೇ ಬುದ್ಧಿ ಕೊಡು ತಾಯೇ. ನಮ್ಮ ಸಾಲದ ಭಾದೆಯನ್ನು ಬೇಗ ತೀರಿಸುವ ಹಾಗೇ ಮಗ-ಸೊಸೆಗೆ ಬುದ್ಧಿ ಕೊಡು. ಅವನು ಒಪ್ಪಿಕೊಂಡಿರುವ 1 ಲಕ್ಷದ 7ಸಾವಿರ ರೂ. ಅನ್ನು ಆದಷ್ಟು ಬೇಗ ಕೊಡುವ ಹಾಗೆ ಮಾಡುವಂತೆ ಕೇಳಿಕೊಂಡಿದ್ದಾರೆ.
ದೇವರಾಜು ಎಂಬಾತನಿಗೆ ಸರ್ಕಾರಿ ಕೆಲಸ ಸಿಗುವಂತೆಯು ಪತ್ರ ಬರೆದಿರುವ ಭಕ್ತೆ, ಐಶ್ವರ್ಯ ಎಂಬ ಹುಡುಗಿ ಬೇಗ ದಪ್ಪವಾಗಿ ಪುಷ್ಟಿಯಾಗಿ ಕಾಣಬೇಕು ಎಂದೆಲ್ಲ ತಮ್ಮ ಬೇಡಿಕೆಯನ್ನು ಮಾರಮ್ಮನಲ್ಲಿ ಕೋರಿದ್ದಾರೆ. ಕೊನೆಯಲ್ಲಿ ರಾಮಕೃಷ್ಣ ಮತ್ತು ಅರುಣ್ ಕುಮಾರ ಹಣವನ್ನು ಕೊಡುವ ಹಾಗೆ ಮಾಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈಗ ಈ ಪತ್ರ ವೈರಲ್ ಆಗಿದ್ದು, ಅವರ ಆಸೆಯನ್ನು ಉಕ್ಕಡದ ಮಾರಮ್ಮ ಈಡೇರಿಸಲಿ ಎಂದು ಜನರೂ ಹಾರೈಸಿದ್ದಾರೆ.