ಸಮಗ್ರ ನ್ಯೂಸ್: ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿ ಹಲವು ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್ ಹಾಕಿದ ಆರೋಪದ ಮೇಲೆ ಶಿವಮೊಗ್ಗದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮುನೀರ್ ಅಲಿಯಾಸ್ ಮಾಝ್ ತಂದೆ ಮನೀರ್ ಅಹಮದ್(57) ನಿನ್ನೆ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟರು.
ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೆ ತಮ್ಮ ಮಗ ಮಾಝ್, ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಅವರಿಗೆ ತಡೆದುಕೊಳ್ಳಲು ಆಗದೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಇವರು ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು.
ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಭದ್ರತೆಯೊಂದಿಗೆ ಮಾಝ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಕ್ಕೆ ಬಂದಿದ್ದ. ಆದರೆ ಮಗ ಮನೆಯೊಳಗೆ ಬರುತ್ತಿದ್ದಂತೆ ತಲೆ ಎತ್ತಿಯೂ ಅವರ ತಾಯಿ ನೋಡಲಿಲ್ಲ. ಪತಿಯ ಸಾವಿಗೆ ಮಗನೇ ಕಾರಣ ಎನ್ನುವ ಕಿಚ್ಚು ಹಾಗೂ ಮಗ ಉಗ್ರ ಸಂಘಟನೆ ಜತೆಗೆ ಗುರುತಿಸಿಕೊಂಡಿರುವುದು ಅಮ್ಮನ ನೋವಿಗೆ ಕಾರಣವಾಯಿತು.
ಈ ವೇಳೆ ತಂದೆಯ ಮೃತದೇಹ ನೋಡಿ ಮಾಝ್ ಕಣ್ಣೀರಿಟ್ಟಿದ್ದಾನೆ. ತನ್ನಿಂದಲೇ ತಂದೆಗೆ ಈ ಪರಿಸ್ಥಿತಿ ಬಂತು ಎಂದು ಗೋಳಾಡಿದ್ದಾನೆ. ಆದರೆ ತಾಯಿ ಮಾತ್ರ ಅವನತ್ತ ದೃಷ್ಟಿ ಎತ್ತಿ ನೋಡಲಿಲ್ಲ. ಮಾತ್ರವಲ್ಲದೇ ಸಂಬಂಧಿಕರೂ ಆತನನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ಇದನ್ನೆಲ್ಲಾ ನೋಡಲು ಆಗದ ಮಾಜ್ ಅರ್ಧ ಗಂಟೆಯಷ್ಟೇ ಸ್ಥಳದಲ್ಲಿದ್ದು, ವಾಪಸ್ ಕರೆದೊಯ್ಯಲು ಪೊಲೀಸರಿಗೆ ಹೇಳಿದ್ದಾನೆ. ಸಂಜೆವರೆಗೂ ಅನುಮತಿ ಇದ್ದರೂ ಬೇಗನೇ ವಾಪಾಸ್ ತೆರಳಿದ್ದಾನೆ. ತಂದೆಯ ಅಂತ್ಯ ಸಂಸ್ಕಾರದಲ್ಲೂ ಆತ ಭಾಗಿಯಾಗಲಿಲ್ಲ.