ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ. 28ರಿಂದ ಅ. 1ರ ವರೆಗೆ ಹೆಚ್ಚುವರಿಯಾಗಿ (4 ದಿನಗಳು) ನೀಡಲು ಸರಕಾರ ಶುಕ್ರವಾರ ಆದೇಶಿಸಿತ್ತು. ಆದರೆ ಜಿಲ್ಲಾಧಿಕಾರಿಗಳು ಶನಿವಾರ ಸಂಜೆ ವೇಳೆಗೆ ಮತ್ತೆ ರಜೆಯನ್ನು ಪರಿಷ್ಕರಣೆ ಮಾಡಿದ್ದು, ಮತ್ತೆ ಜಿಲ್ಲೆಯಾದ್ಯಂತ ಸೆ.28ರಿಂದ ದಸರಾ ರಜೆ ಘೋಷಿಸಿ ಆದೇಶಿಸಿದ್ದಾರೆ.

2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ ಅ. 16ರ ವರೆಗೆ ನಿಗದಿಪಡಿಸಲಾಗಿತ್ತು. ಸರಕಾರ ಇದು ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸೀಮಿತ ಮಾಡಿ ಹೆಚ್ಚುವರಿ 4 ದಿನ ರಜೆ ಪ್ರಕಟಿಸಿದ್ದರು.
ಶನಿವಾರ/ರವಿವಾರ ಪೂರ್ಣ ತರಗತಿ
ಅ.2ರಂದು ಮಹಾತ್ಮಾ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು ಹಾಗೂ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ ತಿಂಗಳಿನಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿ ಹಾಗೂ ಎರಡು ರವಿವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು.
ಇದೀಗ ಮತ್ತೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಈ ಆದೇಶವನ್ನು ವಿಸ್ತರಿಸಿದ್ದು, ರಜೆ ನೀಡುವಲ್ಲಿ ಜಿಲ್ಲಾಡಳಿತ ಗಂಟೆಗೊಂದು ರೂಲ್ಸ್ ಮಾಡುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಮಾತನಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮನವಿಯ ಮೇರೆಗೆ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕಟಣೆಯಲ್ಲಿ ಸೆ. 28 ರಿಂದ ಅ.16ರವರೆಗೆ ರಜೆ ನೀಡಿರುವುದಾಗಿ ತಿಳಿಸಿದ್ದಾರೆ.