ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ. 28ರಿಂದ ಅ. 1ರ ವರೆಗೆ ಹೆಚ್ಚುವರಿಯಾಗಿ (4 ದಿನಗಳು) ನೀಡಲು ಸರಕಾರ ಶುಕ್ರವಾರ ಆದೇಶಿಸಿದೆ.
ಆದರೆ ಇದು ದ.ಕ. ಜಿಲ್ಲೆಯ ಇತರ ತಾಲೂಕುಗಳಿಗೆ ಅನ್ವಯಿಸುವುದಿಲ್ಲ. 2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ ಅ. 16ರ ವರೆಗೆ ನಿಗದಿಪಡಿಸಲಾಗಿತ್ತು. ಸರಕಾರ ಇದೀಗ ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಹೆಚ್ಚುವರಿ 4 ದಿನ ರಜೆ ಪ್ರಕಟಿಸಿದೆ.
ಶನಿವಾರ/ರವಿವಾರ ಪೂರ್ಣ ತರಗತಿ
ಅ.2ರಂದು ಮಹಾತ್ಮಾ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು ಹಾಗೂ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ ತಿಂಗಳಿನಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿ ಹಾಗೂ ಎರಡು ರವಿವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.