ಸಮಗ್ರ ನ್ಯೂಸ್: ದೇವರ ದರ್ಶನಕ್ಕಾಗಿ ಅಂಗಿ ಬನಿಯನ್ ತೆಗೆದು ಪ್ರವೇಶಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ದೂರು ಸಲ್ಲಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತೆ ಸುದ್ದಿಯಲ್ಲಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಆಗಮಿಸುವ ಪುರುಷ ಭಕ್ತರು ಅಂಗಿ-ಬನಿಯನ್ ತೆಗೆದು ಬರಬೇಕು ಎಂಬ ಸದ್ಯ ಇರುವ ನಿಯಮವನ್ನು ಬದಲಿಸಲು ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಮನವಿ ಮಾಡಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಜೊತೆಗೆ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲೂ ಈ ನಿಯಮ ಬದಲಿಸುವಂತೆ ಒಕ್ಕೂಟ ಮನವಿ ಮಾಡಿದೆ.
ಹಿಂದೂ ಸಂಪ್ರದಾಯಗಳಲ್ಲಿ ದೇವಸ್ಥಾನಗಳಲ್ಲಿ ಅಂಗಿ-ಬನಿಯನ್ ತೆಗೆದು ದರ್ಶನ ಪಡೆಯುವ ಪದ್ಧತಿ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಈಗ ಜಾರಿಯಲ್ಲಿರುವ ಅಂಗಿ ಬನಿಯನ್ ತೆಗೆದು ದೇವಸ್ಥಾನ ಪ್ರವೇಶಿಸಬೇಕು ಎಂಬ ನಿಯಮ ಬದಲಿಸುವಂತೆ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮನವಿ ಮಾಡಿದೆ.
ಅಂಗಿ-ಬನಿಯನ್ ಕಳಚಿ ದರ್ಶನ ಪಡೆಯಲು ಸಾಲಿನಲ್ಲಿ ನಿಂತರೆ ಚರ್ಮ ರೋಗ ಇರುವವರಿಂದ ಆ ರೋಗ ಇತರರಿಗೂ ಹರಡುವ ಸಾಧ್ಯತೆ ಇದೆ ಎಂದು ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ವಿಶೇಷಚೇತನರಿಗೂ ಈ ನಿಯಮ ಸಮಸ್ಯೆ ಉಂಟುಮಾಡುತ್ತಿದೆ. ಆದ್ದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ಒಕ್ಕೂಟ ಮನವಿಯಲ್ಲಿ ಆರೋಪಿಸಲಾಗಿದೆ.