ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮುಖಾಮುಖಿಯಾದರು. ಈ ವೇಳೆ ಇಬ್ಬರು ನಾಯಕರು ವಯಸ್ಸಿನ ಕುರಿತು ಲಘು ಸಂಭಾಷಣೆ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪ ಬರುವಾಗ ಎದುರಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಿಕ್ಕಿದ್ದಾರೆ. ಆ ವೇಳೆ ಬಿಎಸ್‍ವೈ ಬಳಿ ಸಿಎಂ, ಸರ್ ಕೌನ್ಸಿಲ್‍ಗೆ ಹೋಗ್ತಾ ಇದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಬಳಿಕ ವಿಧಾನ ಸಭೆಯ ಆಡಳಿತ ಪಕ್ಷದ ಮೊಗಸಾಲೆಗೆ ಹೋಗುವ ದಾರಿಯಲ್ಲಿ ಎದುರಿಗೆ ಸಿಕ್ಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಜೋಕ್ ಮಾಡಿದರು.
ಯಡಿಯೂರಪ್ಪ ಅವರು, ಏನು ನೀವು ಕೌನ್ಸಿಲ್‍ಗೆ ಹೋಗ್ತಾ ಇದ್ದೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಕ್ಕ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮ್ಗೆ. ನೀವೂ ಕೌನ್ಸಿಲ್‍ಗೆ ಹೋಗಲು ಆಗಲ್ಲ, ನಾನೂ ಹೋಗಲು ಆಗಲ್ಲ ಎಂದು ಹೇಳಿದರು. ಅದಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ಮನತುಂಬಿ ನಕ್ಕಿದರು.
ಆ ವೇಳೆಗೆ ಬಂದ ಹೆಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ನಿಲ್ಲಿಸಿ ಮಾತನಾಡಿಸಿದ್ದಾರೆ. ಏನ್ ಸರ್ ಚೆನ್ನಾಗಿದ್ದೀರಾ ಎಂದು ಕಾರಿಡಾರ್‌ನಲ್ಲಿ ಬಿಎಸ್‍ವೈ ನಡೆದುಕೊಂಡು ಹೋಗುತ್ತಿದ್ದಾಗ ಕೈಹಿಡಿದುಕೊಂಡು ಪ್ರಶ್ನಿಸಿದ್ದಾರೆ. ಅದಕ್ಕೆ ಬಿಎಸ್‍ವೈ, ನಾನು ಚೆನ್ನಾಗಿದ್ದೇನೆ, ನಿನ್ನೆ ಅಪ್ಪಾಜಿಯವರನ್ನ ನೋಡೋಕೆ ಹೋಗಿದ್ದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಇದಾದ ಬಳಿಕ ದೇವೇಗೌಡರ ಆರೋಗ್ಯದ ಬಗ್ಗೆ ಬಿಎಸ್‍ವೈ, ಹೆಚ್‍ಡಿಕೆ ಪರಸ್ಪರ ಮಾತನ್ನಾಡಿದ್ದಾರೆ. ಆದರೆ ಪಕ್ಕದಲ್ಲೇ ಸಿದ್ದರಾಮಯ್ಯ ನಿಂತಿದ್ದರೂ ತಿರುಗಿಯೂ ನೋಡದೆ ಹೆಚ್‍ಡಿಕೆ ತೆರಳಿದರು.