ಚಾಮರಾಜನಗರ: ಅಪಾರ ಭಕ್ತ ಸಾಗರವನ್ನೇ ಹೊಂದಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋಗಳನ್ನು ಅಪ್‍ಲೋಡ್ ಮಾಡುವ ಮೂಲಕ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
2013ರಲ್ಲಿ ಕೊಳ್ಳೆಗಾಲದ ಸಂಜಯ್ ಎಂಬುವರು ಕ್ರಿಯೇಟ್ ಮಾಡಿದ್ದ ಶ್ರೀ ಮಲೆಮಹದೇಶ್ವರ ಸ್ವಾಮಿ ಫೇಸ್‍ಬುಕ್ ಪೇಜ್‍ನಲ್ಲಿ 17 ಸಾವಿರ ಫಾಲೋವರ್ಸ್ ಇದ್ದಾರೆ. ಶ್ರೀ ಮಲೆಮಹದೇಶ್ವರ ಸ್ವಾಮಿಯ ಮಹಿಮೆ, ಪೂಜೆ ಪುನಸ್ಕಾರಗಳ ಬಗ್ಗೆ ಮಾಹಿತಿ ಅಪ್ಲೋಡ್ ಆಗುತ್ತಿದ್ದ ಪೇಜ್‍ನಲ್ಲಿಗ ದುಷ್ಕರ್ಮಿಗಳು ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಈ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಫೋಟೋ, ವಿಡಿಯೊಗಳನ್ನು ಹಾಕಲಾಗುತ್ತಿದೆ. ಫೇಸ್‍ಬುಕ್ ಪೇಜ್ ಹ್ಯಾಕ್ ಆದ ಮರು ದಿನವೇ ಅಡ್ಮಿನ್ ಸಂಜಯ್‍ಕುಮಾರ್ ಸೈಬರ್ ಕ್ರೈಂಗೆ ದೂರು ದಾಖಲಿಸಿದ್ದು, ಮಾಹಿತಿ ತಿಳಿದ ಪೊಲೀಸರು 30 ಜನರಿಂದ ರಿಪೋರ್ಟ್ ಮಾಡಿಸಲು ಹೇಳಿ ಸುಮ್ಮನಾಗಿದ್ದಾರೆ.
ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹಾಗಾಗಿ ಹ್ಯಾಕ್ ಆಗಿರುವ ಪೇಜ್ ಅನ್ನು ಡೀ ಆ್ಯಕ್ಟಿವ್ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಂಜಯ್ ಮನವಿ ಮಾಡಿದ್ದಾರೆ.
ತಾನು ಕ್ರಿಯೇಟ್ ಮಾಡಿದ್ದ ಫೇಸ್‍ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ. ಅದರಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಅಪ್‍ಲೋಡ್ ಆಗುತ್ತಿದ್ದು, ಹ್ಯಾಕ್ ಆಗಿರುವ ಬಗ್ಗೆ ತಿಳಿದ ಜನರು ನನಗೆ ಕರೆ ಮಾಡಿ ಬೈಯುತ್ತಿದ್ದಾರೆ ಎಂದು ಸಂಜಯ್ ಅಳಲು ತೊಡಿಕೊಂಡಿದ್ದಾರೆ.