Ad Widget .

ದೇಶಾದ್ಯಂತ ಏಕಕಾಲಕ್ಕೆ ಎನ್ಐಎ ದಾಳಿ| 100 ಕ್ಕೂ ಹೆಚ್ಚು ಮಂದಿ ವಶಕ್ಕೆ| ಎಸ್ಡಿಪಿಐ, ಪಿಎಫ್ಐ ಸಂಘಟನೆಗಳೇ ಟಾರ್ಗೆಟ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬೆಳ್ಳಂಬೆಳಗ್ಗೆಯೇ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪ್ರತಿರೋಧ ತೋರಿದ ಹಲವಾರು ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ.

Ad Widget . Ad Widget .

ದೇಶದ ನಾನಾ ಕಡೆಗಳಲ್ಲಿರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಕರ್ನಾಟಕ ಸೇರಿ ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಲ್ಲೂ ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ತನಿಖಾ ದಾಳಿ ನಡೆದಿದೆ. ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Ad Widget . Ad Widget .

ಕೇರಳದಲ್ಲಿ ಮಧ್ಯರಾತ್ರಿಯಿಂದಲೇ ಎನ್‌ಐಎ ಅಧಿಕಾರಿಗಳು ಸುಮಾರು 50 ಕಡೆ ರೇಡ್‌ ಮಾಡುತ್ತಿದ್ದಾರೆ. ಕೇರಳದಲ್ಲಿ ಪ್ರಮುಖವಾಗಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪಿಎಫ್‌ಐ ಮುಖ್ಯಸ್ಥ ಓಎಂಎ ಸಲಾಮ್‌ ನಿವಾಸದ ಮೇಲೆ ಮಧ್ಯರಾತ್ರಿಯೇ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದು, ಈ ಹಿನ್ನೆಲೆ ಪಿಎಫ್‌ಐ ಕಾರ್ಯಕರ್ತರು ಎನ್‌ಐಎ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು ಪಿಎಫ್‌ಐ ಹಾಗೂ ಎಸ್‌ಡಿಪಿಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದೆ. ಕಣ್ಣೂರು ಮುಖ್ಯರಸ್ತೆಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ಭಾರಿ ಭದ್ರತೆಯೊಂದಿಗೆ ರೇಡ್‌ ಮಾಡಿದ್ದು, ಎನ್‌ಐಎ ತಂಡ ಪರಿಶೀಲನೆ ನಡೆಸುತ್ತಿದೆ.

ಇನ್ನು, ಮಂಗಳೂರಿನಲ್ಲೂ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಮತ್ತು ಎಸ್‌ಡಿಪಿಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದೆ. ಬಜಪೆ, ಜೋಕಟ್ಟೆ ಸೇರಿ ಹಲವೆಡೆ ಮನೆಗಳ ಮೇಲೆ ರೇಡ್‌ ನಡೆದಿದೆ. ಎನ್‌ಐಎ ದಾಳಿ ನಡೆಸುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೆಹಲಿ ಮತ್ತು ಕೇರಳದಲ್ಲಿ ದಾಖಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದಲ್ಲಿ ಅನೇಕ ದಾಳಿಗಳನ್ನು ನಡೆಸಿದೆ. ಕೇರಳದ ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಐಎ ಪಾಪ್ಯುಲರ್ ಫ್ರಂಟ್ ಕಚೇರಿಗಳು ಹಾಗೂ ಮುಖಂಡರ ಮನೆಗಳಲ್ಲಿ ಶೋಧ ನಡೆಸಿದೆ. ಪಿಎಫ್‌ಐ ತಿರುವನಂತಪುರ ಜಿಲ್ಲಾ ಸಮಿತಿ ಕಚೇರಿ ಮೇಲೂ ದಾಳಿ ನಡೆಸಲಾಗುತ್ತಿದೆ. ಹಾಗೂ, ಪಿಎಫ್‌ಐ ಮುಖಂಡರಾದ ಅಶ್ರಫ್ ಮೌಲ್ವಿ, ಇ.ಎಂ ಅಬ್ದುಲ್ ರಹಮಾನ್, ಜೈನುದ್ದೀನ್ ಅವರ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಇನ್ನು, ಈ ರೇಡ್‌ ವೇಳೆ ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯರೊಬ್ಬರನ್ನೂ ಎನ್‌ಐಎ ವಶಕ್ಕೆ ಪಡೆದಿದೆ. ತ್ರಿಶೂರ್ ಮೂಲದ ಯಾಹಿಯಾ ತಂಗಲ್ ಅವರನ್ನು ಪೆರುಂಬೈಲಾವು ಅವರ ಮನೆಯಿಂದ ಬಂಧಿಸಲಾಗಿದೆ. ದಾಳಿ ಖಂಡಿಸಿ ಹಲವೆಡೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಮಾತನಾಡಿ, ಈ ದಾಳಿಯು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *