ಸಮಗ್ರ ನ್ಯೂಸ್: ವಿಜಯಪುರ ನಗರದಲ್ಲಿ ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶಿಸಲು ಅನುಕೂಲವಾಗುವಂತೆ ಕಿತ್ತೂರ ಚನ್ನಮ್ಮನಾಟ್ಯ ಮಂದಿರ ಪ್ರಾರಂಭಿಸುವಂತೆ ಹಾಗೂ ಹಂದಿಗನೂರ ಸಿದ್ರಾಮಪ್ಪ ಬಯಲು ರಂಗಮಂದಿರಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವೃತ್ತಿರಂಗಭೂಮಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ‘ಬಹು ವರ್ಷಗಳಿಂದ ನಾಟಕ ಪ್ರದರ್ಶನ ಇಲ್ಲದೆ ಇರುವುದರಿಂದ ಕಲಾಭಿಮಾನಿಗಳು ಹಾಗೂ ಕಲಾವಿದರು ನಿರಾಶೆಗೊಂಡಿದ್ದಾರೆ’ ಎಂದರು. ನಾಟಕ ಅಕಾಡೆಮಿ ಸದಸ್ಯ ಶ್ರೀಧರ ಹೆಗಡೆ ಹಾಗೂ ಚಿಂದೋಡಿ ಕಂಪನಿ ಮಾಲೀಕ ಕೊಟ್ರೇಶ, ‘ನಗರದ ಹೃದಯ ಭಾಗದಲ್ಲಿರುವ ಕಿತ್ತೂರ ಚನ್ನಮ್ಮನಾಟ್ಯ ಮಂದಿರ ಕಬಳಿಸಲು ಭೂಗಳ್ಳರು ಹೊಂಚು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ ನಾಟ್ಯ ಮಂದಿರದಲ್ಲೇ ಚಳವಳಿ ಮಾಡಲಾಗುವುದು’ ಎಂದರು.
ಸಿದ್ದು ಹಂಪನಗೌಡ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ ಮಾತನಾಡಿ, ‘ಜಿಲ್ಲೆಯಲ್ಲಿ ಸಾಂಸ್ಕೃತಿಕ ಬದುಕು ಬರಡಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದರು.
ಈ ವೇಳೆ ಮಂಜುನಾಥ್ ಜಾಲಿಹಾಳ, ರಾಜಣ್ಣ ಜೇವರಗಿ, ಪ್ರೇಮಾ ಪಾಟೀಲ್, ಅಯ್ಯಣ್ಣಸ್ವಾಮಿ ಹಿರೇಮಠ, ಪ್ರವೀಣ್ ಬಾಗಲಕೋಟೆ, ರೇವಣಸಿದ್ದೇಶ್ವರ ಹೊಸರಮಠ, ಶಂಕ್ರಪ್ಪ ಅರಳಿಹಳ್ಳಿ, ಮಹಾಂತೇಶ ಚಿಕ್ಕಮಠ ಇದ್ದರು.