ಸಮಗ್ರ ನ್ಯೂಸ್: ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಜನಸಾಗರವೇ ಸೇರಿತ್ತು. ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿಕೊಳ್ಳುತ್ತಿದ್ದರು.
ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಅಷ್ಟಕ್ಕೂ ಅಲ್ಲಿ ಮೀನಿನ ಜಾತ್ರೆಯೇ ಶುರುವಾಗಿತ್ತು. ಯಾರಿಗೆ ಯಾರೂ ಕೇಳುವಂತಿಲ್ಲ, ಯಾವ ಮೀನಿಗೂ ದುಡ್ಡು ಕೊಡುವಂತಿಲ್ಲ. ಹೀಗಾಗಿ ಜನ ಪುಕ್ಸಟ್ಟೆ ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಬೇಕಾದಷ್ಟು ಬೂತಾಯಿ ಮೀನುಗಳನ್ನು (Bhoothai fish, Sardine fish) ತುಂಬಿಕೊಂಡು ಮನೆಗೆ ಹೋದ್ರು. ಅಂದಹಾಗೆ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ನಿನ್ನೆ ರಾಶಿ ರಾಶಿ ಮೀನುಗಳು ಬಂದು, ದಡದ ಮೇಲೆ ಬಿದ್ದಿದ್ದವು.
ದಡಕ್ಕೆ ಬಂದು ಬಿದ್ದ ಬೂತಾಯಿ ಮೀನಿನ ರಾಶಿ
ನಿನ್ನೆ ಸೋಮವಾರ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಕಡಲ ತೀರಕ್ಕೆ ಸಮುದ್ರದ ಪಶ್ಚಿಮದ ಕಡೆಯಿಂದ ಪೂರ್ವದ ಕಡೆಗೆ ಸಾಗಿ ಅಲೆಗಳೊಂದಿಗೆ ತೀರಕ್ಕೆ ರಾಶಿ ರಾಶಿ ಮೀನುಗಳು ಅಪ್ಪಳಿಸಿ ಬಂದಿದ್ದವು. ಬೀಚ್‌ನ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ರಾಶಿ ರಾಶಿ ಬೂತಾಯಿ ಮೀನುಗಳು ಬಿದ್ದಿದ್ದವು.
ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿ ಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಕೊನೆಗೆ ರಾಶಿ ರಾಶಿ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋದರು.
ಉಡುಪಿಯ ಮಲ್ಪೆ ಸಮೀಪದ ತೊಟ್ಟಂ ಪರಿಸರದಲ್ಲಿ ಈ ರೀತಿ ಮೀನು ರಾಶಿ ರಾಶಿಯಾಗಿ ಬಂದು ಬಿದ್ದಿದ್ದು ಇದೇ ಮೊದಲ ಬಾರಿಗೆ ಅಂತ ಸ್ಥಳೀಯ ಮೀನುಗಾರರು ಹೇಳುತ್ತಿದ್ದಾರೆ. ಈ ಹಿಂದೆ ಬೆಂಗ್ರೆ, ಪಡುಕರೆ, ಎರ್ಮಾಳು ಸಹಿತ ವಿವಿಧೆಡೆಗಳಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವಂತೆ. ಸಾಮಾನ್ಯವಾಗಿ ಸಮುದ್ರದಲ್ಲಿ ದೋಣಿಗಳು ಮತ್ಸ್ಯ ಭೇಟಿಗೆ ಬಲೆ ಬೀಸಿದ್ದು, ಎಂಜಿನ್ ಶಬ್ಧ ಹಾಗೂ ಬಲೆ ಬೀಸುವುದನ್ನು ತಪ್ಪಿಸಿಕೊಳ್ಳುವ ವೇಳೆ ದಿಕ್ಕು ತಪ್ಪಿದಂತಾಗಿ ಮೀನುಗಳು ತೀರಕ್ಕೆ ಬಂದಿರಬಹುದೆಂದು ಸ್ಥಳೀಯ ಮೀನುಗಾರರು ಹೇಳುತ್ತಿದ್ದಾರೆ.