ಸಮಗ್ರ ನ್ಯೂಸ್ ; ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಮೃತಪಟ್ಟಿರುವ ಬಗ್ಗೆ ತಡವಾಗಿ ಮಾಹಿತಿ ದೊರಕಿದೆ.
ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಗಳ ಪುತ್ರ ನಿಖಿಲ್ (08) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ದಿನಾಂಕ 11ರಂದು ನಿಖಿಲ್‍ನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬುಧವಾರ ಸರಣಿ ಸಾವುಗಳ ಪ್ರಕರಣ ಹೊರ ಬಂದಿದ್ದು, ಈ ವಿಚಾರ ಕೂಡ ಬಹಿರಂಗ ಆಗಿದೆ. ಮೃತ ಬಾಲಕ ನಿಖಿಲ್‍ನ ತಾಯಿ ಈರಮ್ಮ ಅವರ ಆರೋಪ – ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು, ವೆಂಟಿಲೇಟರ್ ಮೇಲೆ ನನ್ನ ಮಗ ಇದ್ದ, ಆದರೆ ಬೆಳಿಗ್ಗೆ ಕರೆಂಟ್ ಹೋದಾಗ ಮಷೀನ್ ಗಳೆಲ್ಲಾ ಬಂದ್ ಆದವು, ಇದು ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು, ಕರೆಂಟ್ ಹೋಗಿದೆ ಎಂದರು.
ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ವಿಚಾರ ಹೇಳಿದ್ದಾರೆ.
ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತರಾದವರ ಸಂಖ್ಯೆ ಎಷ್ಟು? ಎಂಬ ಪ್ರಶ್ನೆ ಉದ್ಭವವಾಗಿದೆ.
ಈಗಾಗಲೇ ಮೌಲಾ ಹುಸೇನ್, ಚಿಟ್ಟೆಮ್ಮ, ಚಂದ್ರಮ್ಮ ಹಾಗೂ ಮನೋಜ್ ಅವರು ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತ ಆಗಿ ಮೃತರಾಗಿದ್ದರು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು.
ಈಗ ನಿಖಿಲ್ ಪೋಷಕರು ಆರೋಪ ಮಾಡುವ ಮೂಲಕ ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತವಾಗಿ, ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವವರ ಸಂಖ್ಯೆ ಐದಕ್ಕೇರಿದೆ.
ಈ ಬಗ್ಗೆ ಈಗಾಗಲೇ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದ್ದು, ಸತ್ಯ ಏನೆಂಬುದು ತಿಳಿದು ಬರಬೇಕಾಗಿದೆ.