ಬೆಂಗಳೂರು: ರಾಜ್ಯ ಸರಕಾರವು ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ಸರಕಾರ ನಿರ್ಧರಿಸಿದೆ.
ಇನ್ನು ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಾಧೀನಕ್ಕೆ ಒಳಪಟ್ಟ ಭೂಮಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಗೊತ್ತುಪಡಿಸಿದ ಅರ್ಹತೆ ಹೊಂದಿದ್ದರೆ ಕಾಯಿದೆ ಜಾರಿಗೆ ಬಂದ ದಿನದಿಂದ ಒಂದು ವರ್ಷದ ಅವಧಿಯಲ್ಲಿ ನಿಯಮ 67 ರ ಅನ್ವಯ ಸೂಕ್ತ ಶುಲ್ಕದೊಂದಿಗೆ ಅರ್ಜಿ ಸಲ್ಲಸಬೇಕಾಗುತ್ತದೆ.