ಬೆಂಗಳೂರು: ಭಾರತ ಜೋಡೋ ಯಾತ್ರೆ, ವಿಧಾನಸಭಾ ಕಲಾಪದ ನಡುವೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
“ಭಾರತ ಜೋಡೋ ಯಾತ್ರೆಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್ ನೀಡಿದೆ” ಎಂದಿದ್ದಾರೆ.
“ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ, ಈ ಸಮನ್ಸ್ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ” ಎಂದಿದ್ದಾರೆ.
ಸೆ.19 ಸೋಮವಾರ ದೆಹಲಿಯ ಇಡಿ ಕಚೇರಿಗೆ ಖುದ್ದು ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ. ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿರುವ ಡಿ.ಕೆ. ಶಿವಕುಮಾರ್ ಒಡೆತನದ ನಿವಾಸದಲ್ಲಿ ನಗದು ದೊರೆತಿದ್ದರಿಂದ, ಐಪಿಸಿಯ ಸೆಕ್ಷನ್ 120 ‘ಬಿ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನ ಸಂಪರ್ಕ ಕಾರ್ಯಕ್ರಮವಾದ ‘ಭಾರತ್ ಜೋಡೋ ಯಾತ್ರೆ’ಗೆ ಸೆಪ್ಟೆಂಬರ್ 07 ರಂದು ಕನ್ಯಾಕುಮಾರಿಯಿಂದ ಚಾಲನೆ ನೀಡಲಾಗಿದೆ. ಈ ಪಾದಯಾತ್ರೆಯು 150 ದಿನಗಳಲ್ಲಿ 3,500 ಕಿ.ಮೀ ಸಾಗಲಿದೆ. ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆ ಮೂಲಕ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ ಮಾಡಲಿದೆ.