ಸಮಗ್ರ ನ್ಯೂಸ್: ಕರ್ನಾಟಕ ವಿಧಾನಮಂಡಲದ ಅಧಿವೇಶನ ಸೋಮವಾರ ಆರಂಭಗೊಳ್ಳಲಿದ್ದು, ಹತ್ತು ದಿನಗಳ ಕಲಾಪದಲ್ಲಿ (ಸೆ.12 ರಿಂದ ಸೆ.23) ಬಿಜೆಪಿ ಸರ್ಕಾರದ ಹೆಡೆಮುರಿ ಕಟ್ಟಲು ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ‘ಅಸ್ತ್ರ’ಗಳನ್ನು ಸಿದ್ಧ ಮಾಡಿಕೊಂಡಿವೆ.
ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಲಂಚದ ಆರೋಪ, ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಜನರಿಗಾದ ಸಂಕಷ್ಟ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅವಾಂತರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಿರುಗೇಟು ನೀಡಲು ಬಿಜೆಪಿಯೂ ತಯಾರಿ ನಡೆಸಿದೆ. 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಧಿವೇಶನವು ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ.
ಶೇ 40ರಷ್ಟು ಲಂಚದ ವಿಷಯವನ್ನು ಕಾಂಗ್ರೆಸ್ ಪ್ರಸ್ತಾಪಿಸಲಿದೆ. ಹಿಂದಿನ ಎರಡು ಅಧಿವೇಶಗಳಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಾರಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ನಾಯಕರು ಅರ್ಕಾವತಿ ರೀಡೂ ವಿಷಯವನ್ನು ಪ್ರಸ್ತಾಪಿಸಿ, ತನಿಖೆಗೆ ಒತ್ತಾಯಿಸುವ ಸಾಧ್ಯತೆಯೂ ಇದೆ. ಲಂಚದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸರ್ಕಾರ ಮುಂದಾದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೂ ಒತ್ತಾಯಿಸುವ ಸಾಧ್ಯತೆ ಇದೆ.
ಪಿಎಸ್‌ಐ ನೇಮಕಾತಿ ಸೇರಿ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ನಡೆದ ಪರೀಕ್ಷೆಯ ಅಕ್ರಮಗಳು ಪ್ರಸ್ತಾಪವಾಗಲಿವೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ನಡೆಯುತ್ತಿದ್ದು, ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಸೇರಿ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ನೇಮಕಾತಿ ಆದೇಶವನ್ನೇ ಸರ್ಕಾರ ರದ್ದು ಮಾಡಿದ್ದು, ಈ ವಿಷಯ ಆಡಳಿತ ಮತ್ತು ವಿರೋಧಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗುವ ನಿರೀಕ್ಷೆಯಿದೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಅವಾಂತರದ ವಿಷಯವೂ ಚರ್ಚೆಗೆ ಬರಲಿದೆ. ಆರ್‌ಎಸ್‌ಎಸ್ ಸ್ಥಾಪಕ ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಸೇರಿ, ಪಠ್ಯಪುಸ್ತಕದಲ್ಲಿನ ಹಲವು ವಿಷಯಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಬಿಸಿ ಬಿಸಿ ಚರ್ಚೆಯಾಗುವ ಸಂಭವ ಉಂಟು.
ರಾಜ್ಯದಲ್ಲಿ ಭಾರಿ ಮಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತವಾಗಿದೆ. ರಾಜಧಾನಿಯ ಕೆಲಭಾಗಗಳಲ್ಲಿ ಸಾರ್ವಜನಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜೊತೆಗೆ ಕೇಂದ್ರದಿಂದ ಅಗತ್ಯ ಪ್ರಮಾಣದ ನೆರವು ಬಂದಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಸಜ್ಜಾಗಿವೆ.
ದಕ್ಷಿಣ ಕನ್ನಡದ ಸುಳ್ಯ ಸಮೀಪ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಘಟನೆ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಆಧಾರಿತ ಹತ್ಯೆಗಳ ವಿಷಯವೂ ಪ್ರಸ್ತಾಪವಾಗಲಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ವಿರೋಧಪಕ್ಷಗಳು ಮುಗಿಬೀಳಬಹುದು.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಪ್ರಯತ್ನ ನಡೆದಿತ್ತು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್ ಮಾಡಿರುವ ಆರೋಪ ಸದನದಲ್ಲಿ ಕಿಡಿ ಹೊತ್ತಿಸುವ ಸಾಧ್ಯತೆ ಇದೆ. ಈ ವಿಚಾರವಾಗಿ ಶ್ವೇತಪತ್ರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಹಿಂದೆ ನಡೆದ ವಿದ್ಯುತ್ ಖರೀದಿ ಒಪ್ಪಂದಗಳನ್ನು ಪರಾಮರ್ಶೆಗೆ ಒಳಪಡಿಸಬೇಕು ಎಂದು ಸಚಿವರು ಹೇಳಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತಿನ ಸಮರ ನಡೆದಿದೆ. ಕಲಾಪದ ವೇಳೆ ಇದು ಪ್ರತಿಧ್ವನಿಸಲಿದೆ.
ಈ ಮಧ್ಯೆ ಕೆಲವು ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಆಡಳಿತ ಪಕ್ಷ ಮುಂದಾಗಲಿದೆ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿ
ರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ, ಬೆಂಗಳೂರುಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ಮಸೂದೆ, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ ಮಸೂದೆ ಈ ಪೈಕಿ ಪ್ರಮುಖವಾದವು.
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕಿದ್ದು, ಪರಿಷತ್ ಸದಸ್ಯ ರಘುನಾಥ ರಾವ್ ಮಲ್ಕಾಪುರೆ ಹಂಗಾಮಿ ಸಭಾಪತಿಯಾಗಿದ್ದಾರೆ. ಚುನಾವಣಾ ದಿನಾಂಕ ನಿಗದಿ ಮಾಡಬೇಕಾಗಿದೆ. ಪರಿಷತ್‌ನಲ್ಲಿ ಬಹುಮತ ಪಡೆದಿರುವ ಬಿಜೆಪಿ ಸಭಾಪತಿ ಮತ್ತು ಉಪಸಭಾಪತಿ ಎರಡೂ ಸ್ಥಾನಗಳಿಗೂ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಿದೆ ಎಂದು ಮೂಲಗಳು ತಿಳಿಸಿವೆ.