ಸಮಗ್ರ ನ್ಯೂಸ್: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಹರಿಯಾಣದಿಂದ ವರದಿಯಾಗಿದೆ. ರಾಜ್ಯದ ಸೋನಿಪತ್‌ನಲ್ಲಿ ಮೂರು ಸಾವುಗಳು ವರದಿಯಾಗಿದ್ದು, ನಾಲ್ವರು ಮಹೇಂದ್ರಗಢದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಪಘಾತದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮೃತರ ಕುಟುಂಬಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಾಹಿತಿ ಪ್ರಕಾರ, ಮಹೇಂದ್ರಗಢ ಜಿಲ್ಲೆಯ ಜಗ್ಡೋಲಿ ಗ್ರಾಮದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಸಮಾರಂಭದಲ್ಲಿ ಸುಮಾರು 20-22 ಜನರು ಕಾಲುವೆಗೆ ಇಳಿದಿದ್ದರು. ಈ ಪೈಕಿ 7-8 ಮಂದಿ ಕಾಲುವೆಯಲ್ಲಿ ಮುಳುಗಿದ್ದು, ಈ ಪೈಕಿ 4 ಮಂದಿ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಾಲುವೆಯಿಂದ 4 ಬಾಲಕರ ಶವಗಳನ್ನು ಹೊರತೆಗೆಯಲಾಗಿದ್ದು, 4 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಕೆ.ಅಭಿರಿ ತಿಳಿಸಿದ್ದಾರೆ.
ಆಗಸ್ಟ್ 31 ರಿಂದ 10 ದಿನಗಳ ಕಾಲ ನಡೆದ ಗಣೇಶ ಉತ್ಸವದ ಕೊನೆಯ ದಿನ ನಿನ್ನೆಯಾಗಿತ್ತು. ಹೀಗಾಗಿ ನಿನ್ನೆ ನಾಡಿನಾದ್ಯಂತ ಗಣೇಶ ಉತ್ಸವ ವಿಸರ್ಜನೆಯೊಂದಿಗೆ ಕೊನೆಗೊಂಡಿತು. ಮಹೇಂದ್ರಗಡ್ ಹೊರತುಪಡಿಸಿ, ಸೋನೆಪತ್‌ನ ಮಿಮಾರ್‌ಪುರ ಘಾಟ್‌ನಲ್ಲಿ ತನ್ನ ಮಗ ಮತ್ತು ಸೋದರಳಿಯನೊಂದಿಗೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.