ಸಮಗ್ರ ನ್ಯೂಸ್: ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಕ್ರೀಡೆಯ ದಿಗ್ಗಜ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಜ್ಯೂರಿಚ್ ನ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಎನಿಸಿಕೊಂಡರು.
ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದು. ತಮ್ಮ ಮುಂದಿನ ನಾಲ್ಕು ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆದು ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ ಅತ್ಯುತ್ತಮ 83.73 ಮೀಟರ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ನೀರಜ್ ಚೋಪ್ರಾ ಅವರೀಗ ಒಲಿಂಪಿಕ್ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ಮತ್ತು ಇದೀಗ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಶ್ರೇಷ್ಠ ಸಾಧಕನಾಗಿದ್ದಾರೆ.