ಸಮಗ್ರ ನ್ಯೂಸ್: ಕ.ರಾ.ರ. ಸಾರಿಗೆ ಬಸ್ ನಿರ್ವಾಹಕನೊಬ್ಬ ಪ್ರಯಾಣಿಕನಿಗೆ ಕಾಲಿನಿಂದ ಒದ್ದು ಕೆಳಕ್ಕೆ ದೂಡಿ ಅಮಾನವೀಯತೆ ಮೆರೆದ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ. ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕೆಎ 21 ಎಫ್ 0002 ನಂಬರ್‌ನ ಬಸ್ ನಿರ್ವಾಹಕ ಪ್ರಯಾಣಿಕನೊಬ್ಬನನ್ನು ಕಾಲಿನಿಂದ ತುಳಿದು ಹೊರಹಾಕಿದ್ದು ಗಾಯಗೊಂಡ ಅವನನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ.
ಹೊರ ಎಸೆಯಲ್ಪಟ್ಟ ಪ್ರಯಾಣಿಕ ಮೇಲ್ನೋಟಕ್ಕೆ ಪಾನಮತ್ತನಂತೆ ಕಂಡು ಬರುತ್ತಿದ್ದು ಈಶ್ವರಮಂಗಲ ಪೇಟೆಯ ಜಂಕ್ಷನ್ ಬಳಿ ಬಸ್ ಹತ್ತುವಾಗಲೇ ನಿರ್ವಾಹಕ ಆತನನ್ನು ತಡೆದು ಮೊದಲು ಆತನ ಕೊಡೆಯನ್ನು ಕೆಳಗೆ ಎಸೆದು ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಆತನ ಎದೆಗೆ ಒದ್ದು ಕೆಳಕ್ಕೆ ದೂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಆತನ ಮುಖದಲ್ಲಿ ರಕ್ತ ಸ್ರಾವವಾಗುತ್ತಿದ್ದರೂ ಆತನನ್ನು ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಸಾಗಿದೆ. ಬಳಿಕ ಸಾರ್ವಜನಿಕರು ಬಂದು ಆತನನ್ನು ಎಬ್ಬಿಸಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ.
ಈ ಘಟನೆ ಈಗಾಗಲೇ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಪಾನಮತ್ತ ಪ್ರಯಾಣಿಕನನ್ನು ಬಸ್ ನಿರ್ವಾಹಕ ತಡೆದಿದ್ದಾನೆ, ಆದರೆ ಪ್ರಯಾಣಿಕರು ಯಾವುದೇ ಸ್ಥಿತಿಯಲ್ಲಿದ್ದರೂ ಅವರ ಮೇಲೆ ಹಲ್ಲೆ ನಡೆಸುವುದು ತಪ್ಪು. ಈ ಕುರಿತು ನಿರ್ವಾಹಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಆತ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಆತನನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾರೆ.