ಸಮಗ್ರ ನ್ಯೂಸ್: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ವ್ಯಾಟ್ಸಾಪ್ ಮೂಲಕ 25 ಲಕ್ಷ ರೂ.ಗೆ ಹುಲಿ ಮರಿಗಳನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸರ್ಪನಮೇಡುವಿನ ವಾಸಿ ಪಥಿಬನ್ ಎಂದು ಗುರುತಿಸಲಾಗಿದ್ದು, ಈತ ತಿರುಪತಿಯಲ್ಲಿ ಕಾನೂನು ಅಧ್ಯಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಟ್ಸಪ್ ಮೂಲಕ ಬುಕ್ಕಿಂಗ್ ಮಾಡಿದ 10 ದಿನಗಳ ನಂತರ ಮರಿಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಅಬಕಾರಿಗಳ ತಂಡ ಆತನ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಹುಲಿಮರಿಗಳು ಇರುವುದು ಕಂಡುಬಂದಿದೆ.
ಪಥಿಬನ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹುಲಿ ಮರಿಗಳ ಮಾರಾಟದಲ್ಲಿ ತಾನು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದನು. ಅಂಬತ್ತೂರಿನ ತಮಿಜ್ ಎಂಬವರು ತನಗೆ ಕೆಲಸ ವಹಿಸಿರುವುದಾಗಿ ತಿಳಿಸಿದ್ದಾನೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಖ್ಯ ಆರೋಪಿ ತಮಿಜ್‍ನನ್ನು ಕೂಡ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.