ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶೌಚಾಲಯದ ಬಳಿ ಶಿಶುವಿನ ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ, ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
16 ವರ್ಷದ ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಪ್ರಾಪ್ತ ಬಾಲಕಿಯನ್ನು ಗರ್ಭವತಿ ಮಾಡಿದ ವ್ಯಕ್ತಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಗ್ರಾಮಸ್ಥರಲ್ಲಿ ಆಘಾತ ಉಂಟುಮಾಡಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ.
ಗುರುವಾರ ಸಂಜೆ ಶೌಚಾಲಯದ ಬಳಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಬಗ್ಗೆ ಶಾಲಾ ಅಧಿಕಾರಿಗಳು ಭುವನಗರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖಾ ತಂಡ ಶುಕ್ರವಾರ ಬಾಲಕಿಯನ್ನು ಗುರುತಿಸಿದ್ದು, ತರಗತಿಗೆ ಹಾಜರಾಗುವಾಗ ಹೆರಿಗೆ ನೋವು ಅನುಭವಿಸಿ ಶೌಚಾಲಯಕ್ಕೆ ಬಂದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.
“ಅಲ್ಲಿ, ಅವಳು ಮಗುವಿಗೆ ಜನ್ಮ ನೀಡಿದಳು. ಮಗು ಗರ್ಭದಲ್ಲೇ ಸಾವನಪ್ಪಿತ್ತು ಎಂದು ಬಾಲಕಿ ಹೇಳಿದ್ದರೂ, ಹೆರಿಗೆಯ ಸಮಯದಲ್ಲಿ ಆಕೆಗೆ ಸಹಾಯ ಸಿಗದ ಕಾರಣ ಮಗು ಸಾವನ್ನಪ್ಪಿರಬಹುದು ಎಂದು ನಾವು ಅನುಮಾನಿಸುತ್ತೇವೆ. ಬಾಲಕಿಯು ಪೆನ್ನನ್ನು ಬಳಸಿ ಸ್ವತಃ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಾಳೆ ಮತ್ತು ತನ್ನ ಆರಂಭಿಕ ಹೇಳಿಕೆಯಂತೆ ತರಗತಿಗೆ ಮರಳಿ ಬಂದಿದ್ದಾಳೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ತಾನು ಗರ್ಭಿಣಿ ಎಂದು ಕುಟುಂಬದ ಯಾರಿಗೂ ತಿಳಿದಿರಲಿಲ್ಲ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಸಂಬಂಧಿಕರು ಸೇರಿದಂತೆ ಹಲವು ಶಂಕಿತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.