ಸಮಗ್ರ ನ್ಯೂಸ್: ವರುಣಾರ್ಭಟಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ರಾಜಧಾನಿ ಬೆಂಗಳೂರು ಅಕ್ಷರಶಃ ಮುಳುಗಡೆಯಾಗಿದೆ. ಇಂತಹ ಸಂದರ್ಭದಲ್ಲಿಯೂ ಕಂದಾಯ ಸಚಿವ ಆರ್.ಅಶೋಕ್ ಸಭೆಯಲ್ಲಿಯೂ ನಿದ್ದೆಗೆ ಜಾರಿದ್ದು, ಸಚಿವರ ಬೇಜವಾಬ್ದಾರಿಗೆ ಕಾಂಗ್ರೆಸ್ ಕಿಡಿಕಾರಿದೆ.

ಸರಣಿ ಟ್ವೀಟ್ ಮೂಲಕ ಕಿಡಿ ಕಾರಿರುವ ಕಾಂಗ್ರೆಸ್, ಬಿಜೆಪಿ ಪ್ರಣಾಳಿಕೆಯ ಭರವಸೆಗಳು ಮಾತ್ರ ಆಕರ್ಷಕ, ಮನಮೋಹಕ. ಆದರೆ ಆಡಳಿತ ಮಾತ್ರ ಜನತೆಗೆ ಯಾತನಾದಾಯಕ, ಭ್ರಷ್ಟಾಚಾರವೇ ಕಾಯಕವಾಗಿದೆ. ಬೆಂಗಳೂರನ್ನು ವಿಶ್ವದರ್ಜೆಯ ನಗರ ಮಾಡುವೆವು ಎಂದ ಬಿಜೆಪಿ ಈಗ ರಸ್ತೆಗುಂಡಿಗಳ ನಗರ, ಮುಳುಗುವ ನಗರವನ್ನಾಗಿ ಮಾಡಿದೆ. ಐಟಿ ಕಂಪೆನಿಗಳು ಗುಳೆ ಹೊರಟರೂ ಕೊಟ್ಟ ಭರವಸೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದೆ.
ಸಿಎಂ ಪ್ರವಾಹ ಪರಿಶೀಲನೆ ಸಭೆ ನಡೆಸುತ್ತಿದ್ದರೆ ಇತ್ತ ಕಂದಾಯ ಸಚಿವರು ನಿದ್ದೆಗೆ ಜಾರಿದ್ದಾರೆ. ಮುಳುಗುವುದರಲ್ಲಿ ಹಲವು ವಿಧಗಳಿವೆ! ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ! ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್.ಅಶೋಕ್ ಅವರ ಭರ್ಜರಿ ನಿದ್ದೆ. ‘ಹಲಾಲ್ ಕಟ್’ ಎಂದರೆ ಥಟ್‌ನೆ ಎಚ್ಚರಾಗುತ್ತಾರೆ. ‘ಚಿಂತೆ ಇಲ್ಲದವನಿಗೆ ಸಂತೆಲೂ ನಿದ್ದೆ’ ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! ಎಂದು ವಾಗ್ದಾಳಿ ನಡೆಸಿದೆ.